“ಬಾಯಿ ಬಿಟ್ಟರೆ ಸಾಕು ಬರೀ ಸುಳ್ಳು, ಬಾಯಿಗೆ ಬಂದಂತೆ ಏನೇನೋ ಮಾತಾಡ್ತಾರೆ. ನಾಲ್ಕು ಬಾರಿ ಶಾಸಕನಾಗಿರುವ ನನ್ನನ್ನು ಪಕ್ಷದಿಂದ ಕತ್ತು ಹಿಡಿದು ದಬ್ಬಿದರು. ಸ್ವಾಭಿಮಾನಿ ನಾನು. ಸುಮ್ಮನಿರಬೇಕೇ? ಎಂದು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುಬ್ಬಿಯಲ್ಲಿ ನಡೆದ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ತನ್ನ ವಿರುದ್ದ ಮಾಡಿದ ಆರೋಪಗಳಿಗೆ ಉತ್ತರ ನೀಡಿದರು. ಬಡವರನ್ನು ಕಂಡರೆ ದಿಢೀರ್ ಕಣ್ಣೀರು ಉಕ್ಕಿ ಬರುತ್ತೆ. ಅಯ್ಯೋ ಅವರಿಗೆ ಕಣ್ಣೀರು ಸುರಿಸೋದೆ ಒಂದು ಕೆಲಸ. ಕಣ್ಣೀರು ಎಲ್ಲಿಂದ ಬರುತ್ತೋ ಎಂದು ಗೇಲಿ ಮಾಡಿದರು.
ನಾಲ್ಕು ಬಾರಿ ಶಾಸಕರಾದಾಗಲೂ ಒಂದು ದಿನವೂ ಕ್ಷೇತ್ರಕ್ಕೆ ಬರಲಿಲ್ಲ. ಏನೂ ಇಲ್ಲದ ಆಸಾಮಿಗಳು ಏನೇನೋ ಮಾತಾಡ್ತಾರೆ. ದೇವೇಗೌಡರನ್ನು ನಾನು ಸೋಲಿಸಿದೆ ಎಂದು ಹೇಳ್ತಾರೆ. ಅಬ್ಬಾ ಕುಮಾರಸ್ವಾಮಿ ಅವರು ಬಾಯಿ ಬಿಟ್ಟರೆ ಸಾಕು ಬರೀ ಸುಳ್ಳು. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ನನ್ನ ಮೇಲೆ ಆರೋಪಿಸಿದರು. ನಿಜವಾಗಿಯೂ ಪಕ್ಷವೆಂಬ ತಾಯಿಗೆ ದ್ರೋಹ ಬಗೆಯುತ್ತಿರುವುದು ಇದೇ ಕುಮಾರಸ್ವಾಮಿ, ನಾನಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಡಿ.ಕೆ.ಶಿವಕುಮಾರ್ ಮನೆಗೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚೆನ್ನಮ್ಮ, ಎಚ್.ಡಿ.ಕುಮಾರಸ್ವಾಮಿ ಬಂದಿದ್ದರು. ನಾನು ಮಾತನಾಡಿಸಿದರೂ ಒಬ್ಬರೂ ಒಂದು ಮಾತೂ ಆಡಲಿಲ್ಲ. ಎಚ್.ಡಿ.ರೇವಣ್ಣ ಅವರ ಮನೆಗೆ ಹೋದಾಗಲೂ ನನ್ನನ್ನು ಮಾತನಾಡಿಸದೆ ಅವಮಾನ ಮಾಡಿದರು. ಬಿಡದಿಗೆ ಹೋದೆ ಒಂದು ದಿನಪೂರ್ತಿ ಇದ್ದೆ ಅಲ್ಲಿಯೂ ನನ್ನನ್ನು ಯಾರೂ ಕೇಳಲೇ ಇಲ್ಲ. ಇದೆಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೆ ಎಂದರು.
ಬಾಯಿಗೆ ಬಂದಂತೆ ಮಾತನಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ. ಇವರಿಗೆ ಮಾನಮರ್ಯಾದೆ ಇದೆಯಾ? ನೀವು ಹೊಟ್ಟೆಗೆ ಏನ್ ತಿನ್ನುತ್ತೀರಾ? ದೇವೇಗೌಡರ ಕುಟುಂಬ ದೇವರ ಮೇಲೆ ಅಪಾರ ಭಕ್ತಿ. ಮಾಟಮಂತ್ರ ಮಾಡುವುದು ಅವರ ಕುಟುಂಬಕ್ಕೆ ಅಂಟಿದ ರೋಗ. ದೇವರ ಮೇಲೆ ನನಗೆ ನಂಬಿಕೆ ಇಲ್ಲ. ಜನರ ಮೇಲೆ ನಂಬಿಕೆ ಇದೆ. ಅವರು ದೈವಭಕ್ತರು ಎಲ್ಲಿಗೆ ಕರೆಯುತ್ತಾರೋ ಅಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಿ ಹೇಳಲಿ. ಸತ್ಯ ಜನರಿಗೆ ತಿಳಿಯಲಿ ಎಂದು ಸವಾಲು ಹಾಕಿದರು.