ಗಣ್ಯರು, ರಾಜಕಾರಣಿಗಳು ಮತ್ತು ಪ್ರಮುಖ ಪತ್ರಕರ್ತರ ಮೇಲೆ ಕಣ್ಗಾವಲು ಇರಿಸಲಾಗಿತ್ತೆಂಬ ಸುದ್ದಿ ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಪೆಗಾಸಸ್ ಕಣ್ಗಾವಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಲು ಸುಪ್ರೀಂಕೋರ್ಟ್ ತಜ್ಞರ ಸಮಿತಿ ರಚಿಸಿ ಮಹತ್ವದ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮೇಲ್ವಿಚಾರಣೆಯ ತ್ರಿಸದಸ್ಯ ಸಮಿತಿಯು ಪೆಗಾಸಸ್ ಹಗರಣದ ಕುರಿತು ಕೂಲಂಕಷವಾಗಿ ಮತ್ತು ತ್ವರಿತವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹೇಳಿದೆ.
ಈ ಪ್ರಕರಣದಲ್ಲಿ ಸರ್ಕಾರದಿಂದ ಅಸ್ಪಷ್ಟ ನಿರಾಕರಣೆ ಸಾಲುವುದಿಲ್ಲ. ಆದ್ದರಿಂದ ಆರೋಪಗಳ ಕುರಿತು ತನಿಖೆ ಆಗಬೇಕು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೇವಲ ಅಫಿಡವಿಟ್ ಸಲ್ಲಿಸಲಾಗುತ್ತಿದೆ. ಸ್ಪಷ್ಟನೆ ನೀಡಿದ್ದರೆ ಹೊರೆ ಕಡಿಮೆ ಆಗುತ್ತಿತ್ತು. ಆದರೂ ನ್ಯಾಯಾಲಯ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ ನ್ಯಾಯಾಲಯ ಮೂಕಪ್ರೇಕ್ಷಕನಂತೆ ಇರುವುದಿಲ್ಲ ಎಂದು ತ್ರಿಸದಸ್ಯ ಪೀಠ ತಿಳಿಸಿದೆ.
ತಜ್ಞರ ಸಮಿತಿ ಸದಸ್ಯರು:
ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ. ಅದರಲ್ಲಿ ಗಾಂಧೀನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ. ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವವಿದ್ಯಾಪೀಠದ ಪ್ರಾಧ್ಯಾಪಕ ಡಾ. ಪ್ರಭಾಹರನ್, ಬಾಂಬೆಯ ಇಂಡಿಯನ್ ಇನ್ ಸ್ಟಿಟೂಟ್ ಆಫ್ ಟೆಕ್ನಾಲಜಿಯ ಪ್ರೊ. ಡಾ.ಅಶ್ವಿನ್ ಅನಿಲ್ ಗುಮಸ್ತೆ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.


