Thursday, November 21, 2024
Google search engine
Homeಮುಖಪುಟಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ನಿಧನ

ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ನಿಧನ

ಸಾಹಿತಿ, ವಿಮರ್ಶಕ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಮಾಜಿ ಸಂಚಾಲಕರಾಗಿದ್ದ ಡಾ.ರಂಗಾರೆಡ್ಡಿ ಕೋಡಿರಾಂಪುರ ಭಾನುವಾರ ಬೆಳಗಿನಜಾವ ನಿಧನರಾಗಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ವಾಸವಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರರು, ಅಪಾರ ಮಂದಿ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಕಿವಿ ಚಿಕಿತ್ಸೆ ಮಾಡಿಸಿಕೊಂಡಿದ್ದ ರಂಗಾರೆಡ್ಡಿ ಅವರಿಗೆ ಇಂದು ಬೆಳಗಿನಜಾವ ಸ್ಟ್ರೋಕ್ ಹೊಡೆದ ಪರಿಣಾಮ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು ಕೋಡಿರಾಂಪುರದವರಾದ ರಂಗಾರೆಡ್ಡಿ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಬಹಳ ವರ್ಷಗಳ ಕಾಲ ಸಕ್ರಿಯರಾಗಿ ಕೆಲಸ ಮಾಡಿದ್ದರು. ಹಲವು ಕಾರ್ಯಾಗಾರಗಳನ್ನು ಕೂಡ ನಡೆಸಿದ್ದರು.

ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಾನಪದ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಕೋಡಿರಾಂಪುರ ಎಂದೇ ಹೆಸರಾಗಿದ್ದರು. ಅವರು ಸಾಲು ಹೊಂಗೆಯ ತಂಪು, ನನ್ನೂರ ಹಾಡು, ಜನಪದ ಸಂಸ್ಕೃತಿ, ಬಂಡಾಯ ಜನಪದ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ರಂಗಾರೆಡ್ಡಿ ನನ್ನ ವಿದ್ಯಾರ್ಥಿ – ಪ್ರೊ. ಪಂಡಿತಾರಾಧ್ಯ

ದುಃಖವಾಯಿತು. ರಂಗಾರೆಡ್ಡಿ 1974ರ ದಶಕದಲ್ಲಿ ಮಂಗಳಗಂಗೋತ್ರಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು. ಬರಗೂರರ ವಿದ್ಯಾರ್ಥಿಯೂ ಆಗಿದ್ದ ಅವರು ಕನ್ನಡಪರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಬಹಳ ದೀರ್ಘ ಕಾಲದವರೆಗೆ ವಿಶೇಷ ಚೇತನದ ಮಗನನ್ನು ನೋಡಿಕೊಂಡಿದ್ದರು. ಅವರು ಭೇಟಿಯಾದಾಗ ಮಗನ ಆರೋಗ್ಯದ ಬಗ್ಗೆ ಆತಂಕವನ್ನು ಹಂಚಿಕೊಳ್ಳುತ್ತಿದ್ದರು. ಕಣ್ಣ ಮುಂದೆ ಕಿರಿಯರು ಕಷ್ಟಪಡುವುದು ಕಣ್ಮರೆಯಾಗುವುದನ್ನು ನೋಡುವುದು ದುಃಖದ ಸಂಗತಿ ಎಂದು ಪ್ರೊ. ಪಂಡಿತಾರಾಧ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಒಡಿನಾಡಿ ಇನ್ನಿಲ್ಲ – ಡಾ.ಗುರುಶಾಂತ್

ಪ್ರೀತಿಯ ಹಿರಿಯ ಗೆಳೆಯ, ಜಾನಪದ ತಜ್ಣ, ಬಂಡಾಯದ ಒಡನಾಡಿ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರ ಅಕಾಲಿಕ ನಿಧನ ದುಃಖ ತಂದಿದೆ. ಎಸ್.ಎಫ್.ಐ, ಡಿ.ವೈ.ಎಫ್.ಐ., ಸೌಹಾರ್ದತೆಗಾಗಿ ಕರ್ನಾಟಕ ಹೀಗೆ ಯಾವ ಕಾರ್ಯಕ್ರಮಕ್ಕಾದರೂ ಇಲ್ಲವೆಂದವರೇ ಅಲ್ಲ. ಜೊತೆಗೂಡುವರು. ಅವರ ಮುನಿಸಿಗೂ, ಕನಸಿಗೂ ಹಲವು ವಿಶಿಷ್ಟತೆಗಳಿದ್ದವು. ಹಲವು ದಶಕಗಳ ಇಂತಹ ಒಡನಾಡಿ ಇನ್ನಿಲ್ಲವಾಗಿದ್ದಾರೆ ಎಂದು ಡಾ.ಗುರುಶಾಂತ್ ಗೌರವ ಪೂರ್ವಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಈ.ಬಸವರಾಜು, ಕೆಜಿವಿಎಸ್

‘ಹಾಡಕಟ್ಟಿ ನವನಾಡ ಕಟ್ಟಿ ಈ ನೆಲಕೆ ನಮಿಸಬನ್ನಿ’ ಎಂಬ ಹಾಡು ರಚಿಸಿ ನಾಡಿನಾದ್ಯಂತ ಖ್ಯಾತರಾಗಿದ್ದ ಬಂಡಾಯ ಕವಿ, ನಿವೃತ್ತ ಉಪನ್ಯಾಸಕರು, ಸದಾ ಹಸನ್ಮುಖಿಯಾಗಿದ್ದ ಆತ್ಮೀಯರಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ರಾತ್ರಿ 2.30 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ತುಂಬಾ ಆಘಾತವನ್ನುಂಟು ಮಾಡಿತು. ಅವರಿಗೆ ಹೃದಯಾಂತರಾಳದ ನಮನಗಳು ಎಂದು ಕೆಜಿವಿಎಸ್ ರಾಜ್ಯಾಧ್ಯಕ್ಷ ಈ ಬಸವರಾಜು ಕಂಬನಿ ಮಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular