ದಕ್ಷಿಣ ಆಫ್ಘಾನಿಸ್ತಾನದ ಕಂದಹಾರ್ ನ ಶಿಯಾ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆಯಲ್ಲಿ ತೊಡಗಿದ್ದ ಜನರ ನಡುವೆ ಇಬ್ಬರು ಆತ್ಮಹತ್ಯೆ ಬಾಂಬ್ ಸ್ಫೋಟಿಸಿಕೊಂಡ ಪರಿಣಾಮ 37 ಮಂದಿ ಮೃತಪಟ್ಟಿದ್ದಾರೆ. ಸುಮಾರು 70 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಮಾಮ್ ಬಾರ್ಗ್ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಗೊಂಡು ಜೀವಹಾನಿಯಾದ ಸ್ವಲ್ಪಹೊತ್ತಿನಲ್ಲೇ ಇಸ್ಲಾಮಿಕ್ ಸ್ಟೇಟ್ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅಲ್ಲದೆ ಉತ್ತರ ಆಫ್ಘಾನಿಸ್ತಾನದ ಮಸೀದಿಯಲ್ಲಿ 48 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.
ಇಮಾಮ್ ಬಾರ್ಗ್ ಮಸೀದಿಯ ಭದ್ರತಾ ದ್ವಾರದ ಬಳಿ ನಾಲ್ವರು ಆತ್ಮಹತ್ಯಾ ಬಾಂಬರ್ ಗಳು ಆಗಮಿಸಿದ್ದು ಅವರಲ್ಲಿ ಇಬ್ಬರನ್ನು ಮಸೀದಿಯ ಒಳಗೆ ಹೋಗದಂತೆ ತಡೆಯಲಾಗಿದೆ. ಆದರೆ ಇನ್ನಿಬ್ಬರು ಮಸೀದಿಯ ಒಳಗೆ ನುಗ್ಗಿ ಸ್ಫೋಟಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರು ಆತ್ಮಹತ್ಯಾ ಬಾಂಬರ್ ಗಳು ಒಳಗೆ ಓಡಿಹೋಗುತ್ತಿದ್ದಂತೆ ಪ್ರಾರ್ಥನೆಯಲ್ಲಿ ತೊಡಗಿದ್ದ ಶಿಯಾ ಮುಸ್ಲೀಮರು ಬೆದರಿ ಓಡಿದರು. ಆಗ ಆತ್ಮಹತ್ಯಾ ಬಾಂಬರ್ ಗಳು ತಮ್ಮ ಸ್ಫೋಟಿಸಿಕೊಂಡರು. ಪ್ರಾರ್ಥನೆ ಸಲ್ಲಿಸುತ್ತಿದ್ದ ಹಲವರು ಗಾಯಗೊಂಡರು. 37 ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಕ್ತಸಿಕ್ತವಾದ ದೇಹಗಳು ಮಸೀದಿಯ ಬಯಲಿನಲ್ಲಿ ಬಿದ್ದಿದ್ದವು. ಸಂಬಂಧಿಕರು ಮಸೀದಿಗೆ ಆಗಮಿಸಿ ಮೃತಪಟ್ಟವರನ್ನು ನೋಡಿ ಕಣ್ಣೀರು ಕರೆಯುತ್ತಿದ್ದರು. ಈ ದೃಶ್ಯ ಮನಕಲಕುವಂತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತೀವ್ರವಾದಿ ಗುಂಪು ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿದ್ದು ಅದರ ಭಾಗವಾಗಿ ಶಿಯಾ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ಸ್ಫೋಟ ಸಂಭವಿಸಿರುವುದನ್ನು ದೃಢಪಡಿಸಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.


