ಎಸ್.ಯುವಿ ವಾಹನ ಹರಿದು ಹತ್ಯೆಯಾದ ನಾಲ್ವರ ರೈತರ ಹೆಸರಿನಲ್ಲಿ ಅಕ್ಟೋಬರ್ 12 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯ ಟಿಕೊನಿಯಾದಲ್ಲಿ ಹುತಾತ್ಮ ರೈತರ ದಿನ ಆಚರಣೆ ನಡೆಯಿತು. ದೇಶದ ಹಲವು ಕಡೆಗಳಿಂದ ಸಹಸ್ರ ಸಹಸ್ರ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುತಾತ್ಮ ರೈತರಿಗೆ ಅಂತಿಮ ಗೌರವ ಸಲ್ಲಿಸಿದರು.
ಟಿಕೊನಿಯದಲ್ಲಿ ದೊಡ್ಡ ಪೆಂಡಾಲ್ ಗಳನ್ನು ಹಾಕಿ ಅದರ ಕೆಳಗೆ ಹತ್ಯೆಯಾದ ನಾಲ್ವರು ರೈತರ ಭಾವಚಿತ್ರಗಳನ್ನು ಇಡಲಾಗಿತ್ತು. ದೇಶದ ಬೇರೆಬೇರೆ ಕಡೆಗಳಿಂದ ಭಾಗವಹಿಸಿದ ರೈತರು ಅಂತಿಮ ನಮನ ಸಲ್ಲಿಸಿದರು.
ಇದೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟಿಕೊನಿಯಗೆ ಭೇಟಿ ನೀಡಿ ಹುತಾತ್ಮ ರೈತರು ಮತ್ತು ಪತ್ರಕರ್ತ ರಮಣ್ ಕಶ್ಯಪ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಿಯಾಂಕ ಅವರು ಹುತಾತ್ಮ ರೈತರ ಭಾವಚಿತ್ರಗಳಿಗೆ ನಮಿಸಿ ವೇದಿಕೆಯ ಮುಂಭಾಗದಿಂದ ಹೊರಬಂದರು.
ಈ ವೇಳೆ ರೈತ ಮುಖಂಡರು ಪ್ರಿಯಾಂಕ ಗಾಂಧಿ ಅವರನ್ನು ವೇದಿಕೆಯತ್ತ ಕರೆದೊಯ್ದರು. ನೆಲದ ಮೇಲೆ ಕುಳಿತು ಸಾವಿರಾರು ರೈತ ನಾಯಕರು ಮತ್ತು ಮುಖಂಡರು ರೈತರಿಗಾಗಿ ಪ್ರಾರ್ಥಿಸಿದರು.
ಇದಕ್ಕೂ ಮೊದಲು ಲಕ್ನೋ-ಸೀತಾಪುರ ಹೆದ್ದಾರಿಯ ಮೂಲಕ ಪ್ರಿಯಾಂಕ ಗಾಂಧಿ ಟಿಕೊನಿಯಗೆ ಆಗಮಿಸಿದರು. ಈ ಸಂದರ್ಭದಲ್ಲಿ ಹೆದ್ದಾರಿ ಉದ್ದಕ್ಕೂ ಪ್ರಿಯಾಂಕ್ ಗೋ ಬ್ಯಾಕ್, ರಾಹುಲ್ ಗಾಂಧಿ ಗೋ ಬ್ಯಾಕ್ ಎಂಬ ಬ್ಯಾನರ್ ಗಳು ಕಂಡುಬಂದವು. ನಕಲಿ ಅನುಕಂಪ ಬೇಡವೆಂದು ಜನರು ಹೇಳುತ್ತಾರೆ’ ಎಂಬ ಬರೆಹಗಳು ಬ್ಯಾನರ್ ಗಳಲ್ಲಿ ಇದ್ದವು.
ಕಾರ್ಯಕ್ರಮಕ್ಕೆ ಪಂಜಾಬ್, ಹರ್ಯಾಣ, ಉತ್ತರಖಂಡ್ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಿಂದ ರೈತರು ಆಗಮಿಸಿದ್ದರು. ಕೆಲವು ಹೆದ್ದಾರಿಗಳಲ್ಲಿ ಭಾರೀ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.