ಕೊವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತವಾಗಿ ಕೊರೊನ ವ್ಯಾಕ್ಸಿನ್ ನೀಡುತ್ತಿರುವುದರಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಪರಮೇಶ್ವರ ತೆಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜನರಿಗೆ ಕೊರೊನ ವ್ಯಾಕ್ಸಿನ್ ನೀಡಿ ಹಣ ಪಡೆದಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರಲಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆ ಹೆಚ್ಚುತ್ತಿರಲಿಲ್ಲ. ನೂವು ಕಡ್ಡಾಯವಾಗಿ ಉಚಿತ ವ್ಯಾಕ್ಸಿನ್ ಪಡೆಯುತ್ತೀರಿ. ನೀವು ಹಣ ನೀಡುತ್ತಿಲ್ಲ ಹಾಗಾದರೆ ಹಣ ಎಲ್ಲಿಂದ ಬರುತ್ತದೆ? ಹಣ ಸಂಗ್ರಹಿಸುವುದಾದರೂ ಹೇಗೆ ಎಂದು ತೆಲಿ ಪ್ರಶ್ನಿಸಿದ್ದಾರೆಂದು ದಿ ವೈರ್ ವರದಿ ಮಾಡಿದೆ.
ದೇಶ 130 ಕೋಟಿ ಜನರಿಗೆ ವ್ಯಾಕ್ಸಿನ್ ನೀಡುವುದು ಸರ್ಕಾರದ ಗುರಿಯಾಗಿದೆ. ಪ್ರತಿ ವಾಕ್ಸಿನ್ ಬೆಲೆ 1200 ರೂಪಾಯಿ. ಪ್ರತಿಯೊಬ್ಬ ವ್ಯಕ್ತಿ ಎರಡು ಡೋಸ್ ಪಡೆಯುತ್ತಾರೆ. ಉಚಿತವಾಗಿ ನೀಡಿದರೆ ಹೇಗೆ ಎಂದು ತೆಲಿ ಹೇಳಿದ್ದಾರೆ.
ಒಂದು ಲೀಟರ್ ಪೆಟ್ರೋಲ್ ಬೆಲೆ 40 ರೂಪಾಯಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆ ವಿಧಿಸುತ್ತವೆ. ಅದರಿಂದ ತೈಲ ಬೆಲೆ ಹೆಚ್ಚಳವಾಗಿದೆ. ಅಸ್ಸಾಂನಲ್ಲಿ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ 28 ರೂ ವ್ಯಾಟ್ ವಿಧಿಸಿದೆ. ಪೆಟ್ರೋಲಿಯಂ ಸಚಿವಾಲಯ 30 ರೂ ವ್ಯಾಟ್ ವಿಧಿಸಿದೆ ಎಂದು ತೆಲಿ ವಿವರಣೆ ನೀಡಿದ್ದಾರೆ.
ಹಿಮಾಲಯದ ವಾಟರ್ ಬಾಟೆಲ್ ಬೆಲೆ ಪೆಟ್ರೋಲ್ ದರಕ್ಕಿಂತ ಹೆಚ್ಚು ಇದೆ. ನೀವು ಹಿಮಾಲಯದ ಬಾಟೆಲ್ ನೀರು ಕುಡಿದಿದ್ದರೆ ಅದರ ಬೆಲೆ ಗೊತ್ತಾಗುತ್ತದೆ. ಹಿಮಾಲಯದ ವಾಟರ್ ಬೆಲೆ 100 ರೂ. ಅಂದರೆ ನೀರಿನ ಬೆಲೆ ಪೆಟ್ರೋಲ್ ಬೆಲೆಗಿಂತ ದುಬಾರಿ ಎಂದು ತೆಲಿ ಹೇಳಿಕೆಯನ್ನು ಉಲ್ಲೇಖಿಸಿ ದಿ ವೈರ್ ವರದಿ ತಿಳಿಸಿದೆ.
ಕಾಂಗ್ರೆಸ್ ವಕ್ತಾರ ಬೊಬ್ಬೀಟ್ ಶರ್ಮಾ, ಪೆಟ್ರೋಲಿಯಂ ರಾಜ್ಯ ಸಚಿವ ಪರಮೇಶ್ವರ ತೆಲಿ ಹೇಳಿಕೆಯನ್ನು ಖಂಡಿಸಿದ್ದಾರೆ. ವ್ಯಾಕ್ಸಿನ್ ಉಚಿತವಾಗಿ ಕೊಡ್ತೀವಿ ಅಂತಾ ಹೇಳ್ತಾರೆ. ಮತ್ತೊಂದು ಕಡೆ ಪೆಟ್ರೋಲ್ ಬೆಲೆ ಜಾಸ್ತಿಯಾಗಲು ವ್ಯಾಕ್ಸಿನ ಉಚಿತ ನೀಡುತ್ತಿರುವುದು ಕಾರಣ ಅಂತಾರೆ. ಇದೇನು ಲಾಜಿಕ್. ಸಚಿವರ ಹೇಳಿಕೆ ನೋಡಿದರೆ ಕೊವಿಡ್ ವ್ಯಾಕ್ಸಿನ್ ಉಚಿತವಾಗಿ ನೀಡುತ್ತಿಲ್ಲ. ಜನರಿಂದ ಪರೋಕ್ಷವಾಗಿ ಹಣ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಉಚಿತ ಎಂಬುದು ಸುಳ್ಳು ಎಂದು ಆರೋಪಿಸಿದ್ದಾರೆ.