ಪ್ರಧಾನಿಗಳು ತಮ್ಮ ಹೆಸರನ್ನು ನರೇಂದ್ರ ಮೋದಿ ಬದಲು ಮೌನೇಂದ್ರ ಮೋದಿ ಎಂದು ಬದಲಾಯಿಸಿಕೊಂಡರೆ ಉತ್ತಮ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗಾಂಧೀ ಪ್ರತಿಮೆ ಮುಂದೆ ಮೌನ ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ಜನರು ಮೃತಪಟ್ಟರು. ಆಗಲೂ ಪ್ರಧಾನಿ ಮಾತನಾಡಲಿಲ್ಲ. ಬಿಜೆಪಿ ಮುಖಂಡರು ಚಕಾರ ಎತ್ತಲಿಲ್ಲ ಎಂದು ದೂರಿದರು.
ಲಖಿಂಪುರಖೇರಿಯಲ್ಲಿ ವಾಹನ ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಈಗಲೂ ಪ್ರಧಾನಿ ನರೇಂದ್ರ ಮೋದಿ ದನಿ ಎತ್ತುತ್ತಿಲ್ಲ. ಒಕ್ಕೂಟ ಸರ್ಕಾರದಿಂದ ರೈತರಿಗೂ ನ್ಯಾಯ ಸಿಕ್ಕಿಲ್ಲ. ಸಾಮಾನ್ಯ ಜನರಿಗೂ ಸೌಲಭ್ಯ ದೊರೆತಿಲ್ಲ. ಹಾಗಾಗಿ ಪ್ರಧಾನಿ ತಮ್ಮ ಹೆಸರನ್ನು ನರೇಂದ್ರ ಮೋದಿ ಬದಲು ಮೌನೇಂದ್ರ ಮೋದಿ ಎಂದು ಬದಲಿಸಿಕೊಂಡರೆ ಉತ್ತಮ ಎಂದು ಲೇವಡಿ ಮಾಡಿದರು.
ನಮ್ಮ ನಾಯಕರ ನೇತೃತ್ವದಲ್ಲಿ ಮೊನ್ನೆ ತಾನೆ ಪ್ರತಿಭಟನೆ ಆಗಿದೆ. ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ. ಇಬ್ಬರು ಸಹ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತಿಭಟನೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಲಖಿಂಪುರಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡಿದ್ದಾನೆ. ರೈತರನ್ನು ಹತ್ಯೆ ಮಾಡಿದ ಸಚಿವರ ಪುತ್ರನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಬಿಜೆಪಿ ಸರ್ಕಾರ ರಾಜಮರ್ಯಾದೆ ಕೊಡುತ್ತಿದೆ ಎಂದರು.
ರೈತರ ಹತ್ಯೆ ಪ್ರಕರಣವನ್ನು ಸರ್ಕಾ ಗಂಭೀರವಾಗಿ ಪರಿಗಣಿಸಿಲ್ಲ. ಮೋದಿಗೆ ಅಂಬಾನಿಯ ಮೊಮ್ಮಗನನ್ನು ನೋಡಲು ಪುರುಸೊತ್ತು ಇದೆ. ರೈತರ ಸಮಸ್ಯೆ ಕೇಳಲು ಇಲ್ಲ. ರೈತರು ಸತ್ತರೂ ಕೂಡ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪುತ್ರನ ವಿರುದ್ಧ ರೈತರ ಹತ್ಯೆ ಆರೋಪ ಹಿನ್ನೆಲೆಯಲ್ಲಿ ಸಚಿವ ಅಜಯ್ ಮಿಶ್ರಾ ಅವರ ರಾಜಿನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.


