ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ ಜವಾಬ್ದಾರಿಯುತ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ, ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನೀವು ಭ್ರಷ್ಟಾಚಾರದ ಪರವೋ ವಿರುದ್ಧವೋ ಸ್ಪಷ್ಟಪಡಿಸಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸವಾಲು ಹಾಕಿದ್ದಾರೆ.
ಯಡಿಯೂರಪ್ಪ ಅಧಿಕಾರದಿಂದ ಇಳಿದಾಗ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸಿದರು. ಈಗ ಐಟಿ ದಾಳಿ ನಡೆದರೆ ಹುಸಿಪ್ರೀತಿ ತೋರಿಸುತ್ತಿದ್ದು ಯಾರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಯಾವುದೇ ಲಾಭ ಆಗುವುದಿಲ್ಲ. ಬಿಜೆಪಿಗೆ ನಷ್ಟವಾಗುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಈ ಇಬ್ಬರು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ವೀರಶೈವ ಲಿಂಗಾಯತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಹೀಗೆ ಮಾತನಾಡುತ್ತಿದ್ದು ಆ ಸಮುದಾಯದ ಮತಗಳು ಬರುತ್ತವೆ ಎಂದುಕೊಂಡರೆ ಸಿದ್ದರಾಮಯ್ಯ, ಕುಮಾರಸ್ವಾಮಿಯಂಥ ದಡ್ಡರು ಯಾರೂ ಇಲ್ಲ. ಯಡಿಯೂರಪ್ಪ ಆಪ್ತರ ಮೇಲೆ ಐಟಿ ರೈಡ್ ನಡೆದರೆ ನಿಮಗೇನು ಕಷ್ಟ? ಎಂದು ಪ್ರಶ್ನಿಸಿದರು.
ಜವಾಬ್ದಾರಿಯುತ ಇಬ್ಬರು ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳನ್ನು ನೀಡುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಸಿಬಿಐ, ಸಿಐಡಿ, ಇಡಿ, ಐಟಿ ಸಂವಿಧಾನಿಕ ಸಂಸ್ಥೆಗಳು. ಆ ಸಂಸ್ಥೆಗಳು ಭ್ರಷ್ಟರ ವಿರುದ್ಧ ದಾಳಿ ಮಾಡಿದರೆ ರಾಜಕೀಯ ವಾಸನೆ ಎನ್ನುತ್ತೀರಲ್ಲ ಹಾಗಾದರೆ ನೀವು ಯಾರ ಪರ ಇದ್ದೀರಾ? ಭ್ರಷ್ಟಾಚಾರದ ಪರವೋ ವಿರುದ್ದವೋ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಗೆ 3667 ಎಕರೆ ಭೂಮಿ ನೀಡಿದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಲಿಲ್ಲ. ನೀರಾವರಿ ಇಲಾಖೆಯಲ್ಲಿ ಆತುರಾತುರವಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನೀರಾವರಿ ನಿಗಮದ ಎಂ.ಡಿ.ಗಳು ಮತ್ತು ಪ್ರಧಾನ ಕಾರ್ಯದರ್ಶಿ ಅವರನ್ನು ಮುಂದಿಟ್ಟುಕೊಂಡು 20 ಸಾವಿರ ಕೋಟಿ ಟೆಂಡರ್ ಮಾಡಿದರು. ಇದನ್ನು ಜುಲೈ 22ರಂದೇ ಎಲ್.ಎಸ್. ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ದೆಹಲಿಯ ವರಿಷ್ಠರಿಗೂ ದಾಖಲೆಗಳನ್ನು ಕಳಿಸಿಕೊಟ್ಟೆ.
ಕಾವೇರಿ, ಕೃಷ್ಣ, ವಿಶ್ವೇಶ್ವರಯ್ಯ ಮತ್ತು ಕರ್ನಾಟಕ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್ ಕುಮಾರ್, ಪ್ರಭಾಕರ್, ಮಲ್ಲಿಕಾರ್ಜುನ ಗುಂಡಿ, ಪೇಶ್ವೆ ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆ ಟಿಕಾಣಿ ಹೂಡಿದ್ದಾರೆ. ಅಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆ ಕಾರಣ ಯಾರು ಗೊತ್ತೆ? ಇದೇ ಸಿದ್ದರಾಮಯ್ಯ ಎಂದು ದೂರಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಾಂವಿಧಾನಿಕ ಸಂಸ್ಥೆ ಲೋಕಾಯುಕ್ತವನ್ನು ಬಾಗಿಲು ಮುಚ್ಚಿಸಿದರು. ರಾಜ್ಯದ 326 ಭ್ರಷ್ಟ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಭ್ರಷ್ಟ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳು ತಪ್ಪಿಸಿಕೊಂಡರು. ಅರ್ಕಾವತಿ ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಸಿದಿರಿ. ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿರಿ ಎಂದು ಆರೋಪಗಳ ಸುರಿಮಳೆಗೈದರು.
ಮಾಜಿ ಸಚಿವ ರಮೇಶ್ ಕುಮಾರ್ ತನ್ನಂಥ ಪ್ರಾಮಾಣಿಕ ಯಾರೂ ಇಲ್ಲ ಎಂದು ಹೇಳಿಕೊಳ್ಳುತ್ತಾರೆ. ಅವನೊಬ್ಬ ಭ್ರಷ್ಟ. ಅರಣ್ಯ ಭೂಮಿಯನ್ನೇ ಕಬಳಿಸಿದವನು. ಎಸ್.ಎಂ.ಕೃಷ್ಣ ಕಾಲದಲ್ಲಿ ಜಾರಿಗೊಳಿಸಿದ ಯಶಸ್ವಿನಿ ಯೋಜನೆಗೆ ತಿಲಾಂಜಲಿ ಇಟ್ಟ ಪುಣ್ಯಾತ್ಮ ಇದೇ ರಮೇಶ್ ಕುಮಾರ್ ಎಂದು ಏಕವಚನದಲ್ಲೇ ಕಿಡಿಕಾರಿದರು.
ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ಸಂಸ್ಥೆಯನ್ನು ಮತ್ತೆ ಆರಂಭಿಸಬೇಕು. 326 ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಯಶಸ್ವಿನಿ ಯೋಜನೆಯನ್ನು ಪುನರಾರಂಭ ಮಾಡಬೇಕು ಎಂದು ವಿಶ್ವನಾಥ್ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದರು.


