Saturday, October 19, 2024
Google search engine
Homeಮುಖಪುಟರೈತರ ಹತ್ಯೆ ಪ್ರಕರಣ - ಕೊನೆಗೂ ಪ್ರಮುಖ ಆರೋಪಿ ಅಶಿಶ್ ಬಂಧನ

ರೈತರ ಹತ್ಯೆ ಪ್ರಕರಣ – ಕೊನೆಗೂ ಪ್ರಮುಖ ಆರೋಪಿ ಅಶಿಶ್ ಬಂಧನ

ಲಖಿಂಪುರಖೇರಿ ರೈತರ ಹತ್ಯೆ ಪ್ರಕರಣ ಆರೋಪಿ ಅಶಿಶ್ ಮಿಶ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಟಿಕಾಯಿತ್) ಹರ್ಯಾಣ ಘಟಕ ಹೇಳಿದೆ.

ಶನಿವಾರ ತಡರಾತ್ರಿ ಅಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಡಿಐಜಿ ಉಪೇಂದ್ರ ಕುಮಾರ್ ಅಗರವಾಲ್ ಹೇಳಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕೆಲವು ಮಾಹಿತಿಗಳ ಬಗ್ಗೆ ಅಶಿಶ್ ಬಾಯಿ ಬಿಡುತ್ತಿಲ್ಲ. ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹಾಗಾಗಿ ನಾವು ಅಶಿಶ್ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಅಗರವಾಲ್ ಹೇಳಿದ್ದಾರೆ.

ಲಖಿಂಪುರಖೇರಿಯಲ್ಲಿ ಅಕ್ಟೋಬರ್ 3ರಂದು ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರ ಮೇಲೆ ಎಸ್.ಯು.ವಿ ವಾಹನ ಹರಿಸಲಾಗಿತ್ತು. ಈ ಸಂದರ್ಭದಲ್ಲಿ ನಾಲ್ವರು ರೈತರು ಸೇರಿ 8 ಮಂದಿ ಮೃತಪಟ್ಟಿದ್ದರು. ರೈತರ ಮೇಲೆ ಹರಿಸಿದ ವಾಹನದಲ್ಲಿ ಸಚಿವ ಅಜಯ್ ಮಿಶ್ರಾ ಪುತ್ರ ಅಶಿಶ್ ಕೂಡ ಇದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡಿದವು.

ರೈತರ ಹತ್ಯೆಗೆ ಪ್ರತಿಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆರೋಪಿಗಳನ್ನು ಬಂಧಿಸುವಂತೆ ತೀವ್ರ ಒತ್ತಡ ಕೇಳಿಬಂದಿತು. ಸುಪ್ರೀಂಕೋರ್ಟ್ ಕೂಡ ಸುಮೊಟೊ ಪ್ರಕರಣ ದಾಖಲಿಸಿ ರೈತರ ಹತ್ಯೆ ಪ್ರಕರಣದ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿತ್ತು.

ಎರಡನೇ ದಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ವರದಿ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಕಾಂಗ್ರೆಸ್, ಟಿಎಂಸಿ, ಎಸ್.ಪಿ. ಬಿಎಸ್.ಪಿ. ಎಎಪಿ ಸೇರಿದಂತೆ ಎಲ್ಲಾ ಪಕ್ಷಗಳು ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಟ್ಟು ಬಂಧಿಸಬೇಕು. ಪುತ್ರ ಅಶಿಶ್ ನನ್ನು ಕೂಡ ಬಂಧಿಸುವಂತೆ ಆಗ್ರಹಿಸಿದ್ದವು.

ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿತು. ಕೊನೆಗೂ ಆರೋಪಿ ನಿವಾಸಕ್ಕೆ ಸಮನ್ಸ್ ಅಂಟಿಸಿ ಬರಲಾಯಿತು. ಶುಕ್ರವಾರ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಹೋಗದೆ ಇಂದು ಬೆಳಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಆರೋಪಿ ಅಶಿಶ್ ಹಾಜರಾದರು.

ಈ ಮಧ್ಯೆ ಸಚಿವ ಅಜಯ್ ಮತ್ತು ಪುತ್ರ ಅಶಿಶ್ ನನ್ನು ಬಂಧಿಸದಿದ್ದರೆ ಪ್ರಧಾನಿ ಗೃಹ ಸಚಿವರ ಪ್ರತಿಕೃತಿ ದಹನ, ಹತ್ಯೆಯಾದ ರೈತರ ಶ್ರದ್ಧಾಂಜಲಿ ಸಭೆ ಮತ್ತು ರೈಲು ರೋಖೋ ಕಾರ್ಯಕ್ರಮ ಮಾಡುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಎಚ್ಚರಿಕೆ ನೀಡಿತ್ತು.

ಸರ್ಕಾರಗಳ ಮೇಲೆ ಒತ್ತಡ ಹೆಚ್ಚಿದಂತೆ ಆರೋಪಿ ಅಶಿಶ್ ನನ್ನು ಬಂಧಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಟಿಕಾಯತ್) ಹರಿಯಾಣ ಘಟಕ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular