ದಕ್ಷಿಣ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಅಕ್ಟೋಬರ್ 7ರಂದು ಮುಂಜಾನೆ ಭೂಕಂಪನ ಸಂಭವಿಸಿ 20 ಮಂದಿ ಸಾವನ್ನಪ್ಪಿದ್ದು 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ನಸೀರ್ ತಿಳಿಸಿದ್ದಾರೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪನಲ್ಲಿ 5.7ರಷ್ಟು ದಾಖಲಾಗಿದೆ. ಜನರು ನಿದ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದ್ದು ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಗಳು ಹೇಳಿವೆ.
ಭೂಕಂಪನದ ಕೇಂದ್ರಬಿಂದು ಕ್ವೆಟ್ಟಾ ಪೂರ್ವಕ್ಕೆ 102 ಕಿಲೋ ಮೀಟರ್ ದೂರದಲ್ಲಿ ಇತ್ತು ಎಂದು ಅಮೆರಿಕಾದ ಜಿಯೋಲಾಜಿಕಲ್ ಸರ್ವೇ ಹೇಳಿದೆ. ಭೂಕಂಪನದ ತೀವ್ರತೆಗೆ 100ಕ್ಕೂ ಹೆಚ್ಚು ಮಣ್ಣಿನಮನೆಗಳು ನಾಶವಾಗಿವೆ. ಸರ್ಕಾರಿ ಕಟ್ಟಡಗಳು ಸೇರಿದಂತೆ ಅಪಾರ ಸಂಖ್ಯೆಯ ಕಟ್ಟಡಗಳಿಗೆ ಹಾನಿಯಾಗಿದೆ.
ನೂರಾರು ಮಂದಿ ಮನೆ ಕಳೆದುಕೊಂಡಿದ್ದು ಬಯಲಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದಿದೆ ಎಂದು ಗೋಹೆಲ್ ಅನ್ವರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ದೃಶ್ಯಾವಳಿಗಳು ಹರಿದಾಡುತ್ತಿವೆ. ಅದರಲ್ಲಿ ಮನೆಗಳು ಅಲುಗಾಡುತ್ತಿರುವುದು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿರುವ ದೃಶ್ಯಗಳು ಕಂಡುಬಂದಿವೆ.
ಬಲೂಸಿಸ್ತಾನ ವಲಯದಲ್ಲಿ ಭೂಕಂಪನ ಸಂಭವಿಸಿದೆ. ಗಾಯಾಳುಗಳಿಗೆ ಮೊಬೈಲ್ ಪ್ಲಾಸ್ ಬೆಳಕಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಡ್ಡಗಳ ಪ್ರದೇಶ ಹರ್ನಾಯಿ ತೀವ್ರ ಹಾನಿಗೊಳಗಾಗಿದೆ. ರಸ್ತೆಗಳು ಬಿರುಕುಬಿಟ್ಟು ಹಾಳಾಗಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಸಂಪರ್ಕವೂ ಇಲ್ಲದಂತಾಗಿದೆ ಎಂದು ವರದಿಗಳು ತಿಳಿಸಿವೆ.
ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹರ್ಮಿ ಹೇಳಿದ್ದಾರೆ. ಕ್ವೆಟ್ಟಾದಲ್ಲಿ ಭೂಕಂಪನ ಉಂಟಾಗಿದೆ. 20 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ ಎಂದು ಬಲೂಚಿಸ್ತಾನದ ಗೃಹ ಸಚಿವ ಮಿರ್ ಜಿಯಾ ಉಲ್ಲಾ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ವಿದ್ಯುತ್ ಇಲ್ಲದೆ ಮೊಬೈಲ್ ಟಾರ್ಚ್ ಹಾಕಿಕೊಂಡು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 40 ಮಂದಿ ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು.