Friday, October 18, 2024
Google search engine
Homeಮುಖಪುಟಕೃಷಿ ಕಾಯ್ದೆ ರದ್ದತಿಗೆ ಆಗ್ರಹ - ಅನ್ನದಾತರ ಆಕ್ರೋಶ

ಕೃಷಿ ಕಾಯ್ದೆ ರದ್ದತಿಗೆ ಆಗ್ರಹ – ಅನ್ನದಾತರ ಆಕ್ರೋಶ

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತಸಮೂಹ ಆಕ್ರೋಶಗೊಂಡಿದೆ. ರಸ್ತೆ, ರೈಲು ತಡೆಯಿಂದ ಒಕ್ಕೂಟ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ರೈತರ ನೋವನ್ನು ಆಲಿಸಬೇಕಾದ ಪ್ರಧಾನಿ ಅಮರಿಕಾ ಪ್ರವಾಸ ಕೈಗೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ದೇಶದ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ರೈತರ ಒಡಲ ಬೇಗುದಿಗೆ ಕಿವಿಗೊಡುತ್ತಿಲ್ಲ. ಅನ್ನದಾತ ಜೀವದಾತ ಎನ್ನುವುದನ್ನೇ ಮರೆತಿದ್ದಾರೆ.

ರೈತರ ಬೆಂಬಲಕ್ಕೆ ಸಾವಿರಾರು ಸಂಘಟನೆಗಳು ನಿಂತಿವೆ. ರೈತರ ಪರವಾಗಿ ಬೀದಿಗೆ ಇಳಿದಿವೆ. ವಿದ್ಯಾರ್ಥಿ ಸಮೂಹ, ಯುವಜನರು, ಎಡಪಕ್ಷಗಳು, ಕಾರ್ಮಿಕರು, ಮಹಿಳೆಯರು, ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಆರ್.ಜೆಡಿ. ಎಸ್.ಪಿ ಹೀಗೆ ಹಲವು ರಾಜಕೀಯ ಪಕ್ಷಗಳು ಭಾರತ್ ಬಂದ್ ಗೆ ಧುಮುಕಿವೆ. ದೇಶದಲ್ಲೆಡೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ. ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂಬ ಒಕ್ಕೊರಲ ಧ್ವನಿ ವ್ಯಕ್ತವಾಗಿದೆ.

ಬಿಜೆಪಿ ವಿರೋಧಿ ಪಕ್ಷಗಳು ಒಂದುಗೂಡಿ ಪ್ರತಿಭಟನೆ ನಡೆಸಿದವು. ರೈತರು ರೈಲು ಹಳಿಗಳ ಮೇಲೆ ಕುಳಿತು ಪ್ರತಿರೋಧ ವ್ಯಕ್ತಪಡಿಸಿದರು. ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಪಶ್ಚಿಮಬಂಗಾಳ, ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ಕೇರಳ ಮೊದಲಾದ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಅನ್ನದಾತರ ನೋವಿಗೆ ದೇಶದ ಜನತೆ ಸ್ಪಂದಿಸಿದೆ.

ಮಹಿಳೆಯರು, ವೃದ್ಧರು, ಯುವಕರು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಗೆ ಸಾಧ್ ನೀಡಿದ್ದಾರೆ. ಎಡಪಕ್ಷಗಳು ದೊಡ್ಡಮಟ್ಟದ ಹೋರಾಟಗಳನ್ನು ನಡೆಸಿವೆ. ರಾಷ್ಟ್ರೀಯ ಜನತಾ ದಳ ಕಾರ್ಯಕರ್ತರು ಬಿಹಾರದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪಾಲಿಗೆ ಉರುಳಾಗಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಶ್ರೀಮಂತರ ಕೈಗೆ ಸೇರಲಿದೆ. ರೈತರು, ಸಣ್ಣ ವ್ಯಾಪಾರಿಗಳು ಕೂಡ ಸಂಕಷ್ಟಕ್ಕೆ ಗುರಿಯಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇಡೀ ಕೃಷಿ ಕ್ಷೇತ್ರ ಬಂಡವಾಳಗಾರರ ಪಾಲಾದರೆ ರೈತರು ಗುಲಾಮರಾಗಬೇಕಾದ ಸನ್ನಿವೇಶ ನಿರ್ಮಾಣವಾಗಲಿದೆ ಎಂಬ ಆತಂಕ ರೈತ ನಾಯಕರನ್ನು ಕಾಡುತ್ತಿದೆ. ಅದೇ ಕಾರಣಕ್ಕೆ ಬಂದ್ ನಡೆಸಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ರೈತರು, ಕಾರ್ಮಿಕರು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪರಿಣಾಮ ವಾಹನ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಿದೆ.

ವಿವಾದಿತ ಕೃಷಿ ಕಾಯ್ದೆಗಳ ರದ್ದಿಗೆ ಆಗ್ರಹಿಸಿ ಆರು ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ರೈತರು ದಣಿವುಗೊಂಡಿಲ್ಲ. ಮತ್ತಷ್ಟು ಚೈತನ್ಯಗೊಂಡಂತಿರುವ ರೈತರು ಬಿಸಿಲು ಚಳಿ ಮಳೆ ಎನ್ನದೆ ರಸ್ತೆಗಳಲ್ಲೇ ಜೀವನ ದೂಡುತ್ತಿದ್ದಾರೆ. ಆದರೂ ಕೇಂದ್ರದ ಕಿವಿಗೆ ಈ ನೋವಿನ ಕೂಗು ಕೇಳಿಸದೇ ಇರುವುದು ನಾಚಿಕೆಗೇಡಿನ ಸಂಗತಿ.

ಇತ್ತ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ ರಕ್ಷಣಾ ವೇದಿಕೆ, ದಲಿತಪರ ಸಂಘಟನೆಗಳು, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕನ್ನಡ ಚಿತ್ರರಂಗ ಕೂಡ ಭಾರತ್ ಬಂದ್ ಗೆ ಬೆಂಬಲ ನೀಡಿ ಬೀದಿಗೆ ಇಳಿದಿವೆ. ಬೆಂಗಳೂರಿನಲ್ಲಿ ಟೌನ್ ಹಾಲ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular