ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯ ದೌದಪುರ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಜಾತಿ ತಾರತಮ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮಧ್ಯಾಹ್ನ ಬಿಸಿಯೂಟ ನೀಡುವ ಸಂದರ್ಭದಲ್ಲಿ ಸವರ್ಣೀಯ ಮತ್ತು ದಲಿತ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಊಟ ಕೊಡುವುದು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಕಂಡುಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟ ನೀಡುವುದಲ್ಲದೆ, ಅವರ ತಟ್ಟೆಗಳನ್ನು ಅವರೇ ತೊಳೆದು ಪ್ರತ್ಯೇಕವಾಗಿ ಇಡಿಸುವ ಮೂಲಕ ಜಾತಿ ತಾರತಮ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಗರಿಮ್ ರಜಪೂತ್ ಅವರನ್ನು ಅಮಾನತು ಮಾಡಿದ್ದು, ಇಬ್ಬರು ಅಡುಗೆಯವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ದೌದಪುರದ ಹೊಸದಾಗಿ ಸರಪಂಚರಾಗಿ ಆಯ್ಕೆಯಾದ ಮಂಜುದೇವಿ ಅವರ ಪತಿ ಸಾಹಬ್ ಸಿಂಗ್ ಅವರಿಗೆ ಹಲವು ಪೋಷಕರು ಶಾಲೆಯಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಬ್ ಸಿಂಗ್ ಅಧಿಕಾರಿಗಳಿಗೆ ದೂರು ನೀಡಿದ್ದರು.
” ನಾವು ದೂರು ಸ್ವೀಕರಿಸಿದ್ದೇವೆ. ಅಧಿಕಾರಿಗಳನ್ನು ಶಾಲೆಗೆ ಪರಿಶೀಲನೆಗಾಗಿ ಕಳಿಸಿದ್ದೇವೆ. ದಲಿತ ಮತ್ತು ಸವರ್ಣೀಯ ಮಕ್ಕಳನ್ನು ಪ್ರತ್ಯೇಕವಾಗಿ ಪಂಕ್ತಿ ಕೂರಿಸಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ಮೈನಪುರಿ ಬೇಸಿಕ್ ಶಿಕ್ಷಾ ಅಧಿಕಾರಿ ಕಮಲ್ ಸಿಂಗ್ ಹೇಳಿಕೆ ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ಹೇಳಿದೆ.
ಬಿಇಒ ಮತ್ತು ಇತರೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಸೋಮವತಿ ಮತ್ತು ಲಕ್ಷ್ಮೀದೇವಿ ಇಬ್ಬರು ಅಡುಗೆಯವರು ದಲಿತ ವಿದ್ಯಾರ್ಥಿಗಳನ್ನು ಮುಟ್ಟಲು ನಿರಾಕರಿಸಿದರು. ದಲಿತ ವಿದ್ಯಾರ್ಥಿಗಳನ್ನು ಮುಟ್ಟುವಂತೆ ಒತ್ತಾಯ ಮಾಡಿದರೆ ಶಾಲೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ ಎಂದು ಅದಿಕಾರಿಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಗಳ ಎದುರೇ ಜಾತಿ ನಿಂದನೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಸರಪಂಚ ಮಂಜುವತಿ ಪತಿ ಸಾಹಬ್ ಸಿಂಗ್ ಅವರಿಗೆ ಕೆಲ ಪೋಷಕರು ಸೆಪ್ಟೆಂಬರ್ 15 ಮತ್ತು 18ರಂದು ಶಾಲೆಯಲ್ಲಿ ತಾರತಮ್ಯ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಹಾಗಾಗಿ ಅವರು ಶಾಲೆಗೆ ಭೇಟಿ ಕೊಟ್ಟು ನೋಡಿದಾಗ ‘ಅಡುಗೆ ಮನೆಯಲ್ಲಿ ಶುಚಿತ್ವ ಇರಲಿಲ್ಲ. ಅಲ್ಲಿ 10-15 ತಟ್ಟೆಗಳು ಮಾತ್ರ ಇದ್ದುದು ಕಂಡುಬಂದಿವೆ ಎಂದು ವರದಿಯಾಗಿದೆ.
ಉಳಿದ ತಟ್ಟೆಗಳು ಎಲ್ಲಿ ಎಂದು ಪ್ರಶ್ನಿಸಿದಾಗ ಹಿಂದುಳಿದ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ತಟ್ಟೆಗಳನ್ನು ಪ್ರತ್ಯೇಕವಾಗಿ ಇಡಿಸಿರುವುದು ಬೆಳಕಿಗೆ ಬಂದಿದೆ. 50-60 ತಟ್ಟೆಗಳು ಪ್ರತ್ಯೇಕವಾಗಿ ಜೋಡಿಸಿರುವುದು ಪತ್ತೆಯಾಗಿದೆ. ಆ ತಟ್ಟೆಗಳು ದಲಿತ ವಿದ್ಯಾರ್ಥಿಗಳು ಬಳಸುತ್ತಿದ್ದರು ಮತ್ತು ಅವರ ತಟ್ಟೆಗಳನ್ನು ಅವರೇ ತೊಳೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ದೌದಪುರದಲ್ಲಿ ಶೇಕಡ 35ರಷ್ಟು ದಲಿತ ಸಮುದಾಯ ವಾಸಿಸುತ್ತಿದ್ದರೆ, ಅಷ್ಟೇ ಸಂಖ್ಯೆಯ ಠಾಕೂರ್ ಸಮುದಾಯವೂ ಇದೆ. ಉಳಿದವರು ಹಿಂದುಳಿದ ವರ್ಗಕ್ಕೆ ಸೇರಿದವರು ಆಗಿದ್ದಾರೆ.


