ಒಳಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನ ವಿರೋಧಿಸಿದಂತೆ. ಆದ್ದರಿಂದ ಒಳಮೀಸಲಾತಿ ಜಾರಿಯಾಗಲೇಬೇಕು ಎಂದು ಹಿರಿಯ ಚಿಂತಕ ಡಾ.ಅರವಿಂದ ಮಾಲಗತ್ತಿ ಒತ್ತಾಯಿಸಿದರು.
ತುಮಕೂರಿನಲ್ಲಿ ನಡೆದ ಮಾದಿಗರ ಸ್ವಾಭಿಮಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಯಾದರೆ ಅಸ್ಪೃಶ್ಯ ಸಮುದಾಯಗಳಿಗೆ ಅನುಕೂಲವಾಗಲಿದೆ. ಎಡ-ಬಲ ಸಂಘರ್ಷ ಕಡಿಮೆ ಆಗಲಿದೆ ಎಂದು ಸಲಹೆ ನೀಡಿದರು.
ಎಡ-ಬಲ ಸಮುದಾಯ ಮಾತಂಗ ಮುನಿಯ ಒಕ್ಕಲು. ಕಾಲಾನಂತರದಲ್ಲಿ ಭಿನ್ನವಾಗಿ ಬೇರೆಯಾದವು. ಈ ಎರಡೂ ಅಸ್ಪೃಶ್ಯ ಸಮುದಾಯಗಳಾಗಿವೆ. ಇಂತಹ ತಳಸಮುದಾಯಗಳು ಮತ್ತು ಅವಕಾಶವಂಚಿತರಿಗೆ ಅವಕಾಶ ಸಿಗಬೇಕಾದರೆ ಸದಾಶಿವ ವರದಿ ಜಾರಿಗೊಳ್ಳಲೇಬೇಕು ಎಂದು ಪ್ರತಿಪಾದಿಸಿದರು.
ಆರ್ಥಿಕವಾಗಿ ದುರ್ಬಲ ವರ್ಗವೆಂದು ಪರಿಗಣಿಸಿರುವ ಬ್ರಾಹ್ಮಣರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಲಾಯಿತು. ಯಾವುದೇ ಪ್ರತಿಭಟನೆ, ಒತ್ತಾಯ ಇಲ್ಲದಿದ್ದರೂ ಕೇಂದ್ರ ಸರ್ಕಾರ ಚರ್ಚೆಯನ್ನೇ ನಡೆಸದೆ ಮೀಸಲಾತಿ ಕೊಟ್ಟಿತು. ಆದರೆ ಮೂರು ದಶಕದಿಂದ ಪ್ರತಿಭಟನೆ ಮಾಡುತ್ತಾ ಬಂದರೂ ದಲಿತರಿಗೆ ಶೇ.1ರಷ್ಟು ಮೀಸಲಾತಿಯನ್ನು ನೀಡಿಲ್ಲ. ಅಂದರೆ ಸರ್ಕಾರಗಳು ಯಾರ ಪರವಾಗಿವೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಡ-ಬಲದ ವರ್ಗೀಕರಣ ಸಾಂಪ್ರದಾಯಿಕವಾಗಿ ನೋಡಿದ್ದರಿಂದ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ.ಎಡ-ಬಲ ಮಾತಂಗರ ಆಡಳಿತದ ಪ್ರತಿಬಿಂಬ, ಎಡ-ಬಲ ಸಮುದಾಯದೊಂದಿಗೆ ಆಡಳಿತ ನಡೆಸಿದ ರೀತಿ ಇದು ಎಂದು ವ್ಯಾಖ್ಯಾನಿಸಿದರು.
ಕವಿ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, “ದೇಶದಲ್ಲಿ ಶೇ.4ರಷ್ಟಿರುವ ಜನ ಶೇಕಡ 10ರಷ್ಟು ಮೀಸಲಾತಿಯನ್ನು ಯಾವುದೇ ಹೋರಾಟವಿಲ್ಲದೆ ಪಡೆದುಕೊಂಡಿದ್ದಾರೆ. ಆದರೆ ಶೇಕಡ 60ರಷ್ಟಿರುವ ದಲಿತರಿಗೆ ಶೇ.15ರಷ್ಟು ಮೀಸಲಾತಿ ಪಡೆದು ಅವಕಾಶ ವಂಚಿತರಾಗುತ್ತಿದ್ದೇವೆ. ಈ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿದಾಗ ಇಂತಹ ಸಮಾವೇಶಗಳಿಗೆ ಅರ್ಥ ಬರುತ್ತದೆ’ ಎಂದರು.
ಬುದ್ದನ ಹಾದಿ ಬಿಟ್ಟು ಬ್ರಾಹ್ಮಣ್ಯವನ್ನು ಅಪ್ಪಿಕೊಳ್ಳುವ, ಅವರಿಗೆ ಗುಲಾಮರಾಗಿ ಬದುಕುವ ಮುನಿಗಳಾಗಲಿ, ರಾಜಕಾರಣಿಗಳಾಗಲಿ ನಮಗೆ ಅಗತ್ಯವಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಆತ್ಮವಿಮರ್ಶೆ ಮಾಡಿಕೊಂಡು ಸಮುದಾಯದ ಜೊತೆ ಬೆರೆತು ಕೆಲಸ ಮಾಡುವ ಧರ್ಮಗುರುಗಳು, ರಾಜಕಾರಣಿಗಳ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾರ್ಕಂಡೇಯ ಮುನಿಸ್ವಾಮೀಜಿ, ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಷಡಕ್ಷರಿ ಮುನಿ ಸ್ವಾಮೀಜಿ, ಮಾಜಿ ಶಾಸಕರಾದ ಗಂಗಹನುಮಯ್ಯ, ತಿಮ್ಮರಾಯಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಸದಸ್ಯರಾದ ಕೆಂಚಮಾರಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು.


