Friday, October 18, 2024
Google search engine
Homeಮುಖಪುಟಚಾಣಕ್ಯ ವಿವಿ ಸ್ಥಾಪನೆಗೆ ಅವಕಾಶ ಕೂಡದು - ಸಿದ್ದರಾಮಯ್ಯ

ಚಾಣಕ್ಯ ವಿವಿ ಸ್ಥಾಪನೆಗೆ ಅವಕಾಶ ಕೂಡದು – ಸಿದ್ದರಾಮಯ್ಯ

ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಯ ಮಸೂದೆಯನ್ನು ಚರ್ಚೆಗೆ ಅವಕಾಶ ನೀಡದೆ ಧ್ವನಿಮತದ ಮೂಲಕ ಅಂಗೀಕರಿಸಿದ್ದು, ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ಧೇಶಿಸಿರುವುದು ಸೆಸ್ ಸಂಸ್ಥೆ. ಈ ಸಂಸ್ಥೇಯಲ್ಲಿರುವ ಎಲ್ಲರೂ ಆರ್.ಎಸ್.ಎಸ್. ವ್ಯಕ್ತಿಗಳು. ಸೆಸ್ ಸಂಸ್ಥೆ ಈವರೆಗೆ ಯಾವುದೇ ಶೈಕ್ಷಣಿಕ ಸಂಸ್ಥೇಯನ್ನು ನಡೆಸಿಲ್ಲ. ಜೊತೆಗೆ ವಿಶ್ವವಿದ್ಯಾಲಯ ಆರಂಭಿಸಲು ಬೇಕಾದ ಮೂಲಸೌಕರ್ಯ ಇವರಲ್ಲಿ ಇಲ್ಲ. ಯಾವ ಆಧಾರ ಮತ್ತು ಅರ್ಹತೆ ಮೇರೆಗೆ ವಿಶ್ವವಿದ್ಯಾಲಯ ಆರಂಭಿಸಲು ರಾಜ್ಯ ಸರ್ಕಾರ ಇವರಿಗೆ ಭೂಮಿನೀಡಿದೆ ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ 26-04-2021ರಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಆ ಮೂಲಕ ನಿರ್ಣಯ ಕೈಗೊಂಡು ದೇವನಹಳ್ಳಿ ಬಳಿ ಹರಳೂರು ಗ್ರಾಮದಲ್ಲಿ ಏರೋಸ್ಪೇಸ್ ಹಾಗೂ ಡಿಫೆನ್ಸ್ ಇಂಡಸ್ಟ್ರೀ ಸ್ಥಾಪನೆಯ ಉದ್ದೇಶಕ್ಕಾಗಿ ವಶಪಡಿಸಿಕೊಂಡಿದ್ದ ಕೆಐಎಡಿಬಿಗೆ ಸೇರಿದೆ 116 ಎಕರೆ 16 ಗುಂಟೆ ಜಮೀನನ್ನು ಸೆಸ್ ಸಂಸ್ಥೆಗೆ ನೀಡಲು ಆದೇಶಿಸಿದೆ.

ಕೆಐಎಡಿಬಿ ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಎಕರೆಗೆ 1 ಕೋಟಿ ರೂ 50 ಲಕ್ಷದಂತೆ ಒಟ್ಟು 116 ಎಕರೆಗೆ 175 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಇದೇ ಜಮೀನನ್ನು ರಾಜ್ಯ ಸರ್ಕಾರ ಕೇವಲ 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದೆ. ಈ ಭೂಮಿಯ ಈಗಿನ ಮೌಲ್ಯ ಕನಿಷ್ಠ 300 ರಿಂದ 400 ಕೋಟಿಗಳಾಗಿರುತ್ತದೆ. ಅತ್ಯಧಿಕ ಮೌಲ್ಯದ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಸರ್ಕಾರ ಆರ್.ಎಸ್.ಎಸ್.ಗೆ ಬಳುವಳಿ ರೂಪದಲ್ಲಿ ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ನಿಬಂಧನೆಗಳನ್ನು ಗಾಳಿಗೆ ತೂರಿ, ಶಿಕ್ಷಣ ಸಂಸ್ಥೆಯೇ ಇಲ್ಲದ ಸಂಸ್ಥೆಗೆ ಭೂಮಿ ನೀಡಿರುವುದು ಅಪರಾಧವಷ್ಟೇ ಅಲ್ಲ, ಇದೊಂದು ದೊಡ್ಡ ಹಗರಣ ಕೂಡ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೊರೊನ ಎರಡನೇ ಅಲೆಯ ಭೀತಿಯಿದ್ದ ವೇಳೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಆತುರಾತುರವಾಗಿ ಜಮೀನನ್ನು ಸೆಸ್ ಸಂಸ್ಥೆಗೆ ನೀಡಿದೆ. ಇದು ಮನುವಾದಿಗಳ ವಿಶ್ವವಿದ್ಯಾಲಯ. ಚಾಣಕ್ಯ ಕೂಡ ಮನುವಾದಿ ಕುಟುಂಬಕ್ಕೆ ಸೇರಿದವರು ಎಂದು ಹೇಳಿದ್ದಾರೆ.

ಈ ಶಿಕ್ಷಣ ಸಂಸ್ಥೆ ಚತುರ್ವರ್ಣ ವ್ಯವಸ್ಥೆಯ ಪುನರ್ ಸ್ಥಾಪನೆ ಮಾಡುವ ದುರುದ್ದೇಶ ಹೊಂದಿದೆ. ಚಾಣಕ್ಯ ವಿಶ್ವವಿ್ಯಾಲಯ ಮಸೂದೆಯ ಬಗ್ಗೆ ಗೌರವಾನ್ವಿತ ಸಭಾಧ್ಯಕ್ಷರು ಕೂಡ ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಅಗತ್ಯವಾಗಿ ಚರ್ಚಿಸಬೇಕಿದ್ದ ಪ್ರಮುಖ ವಿಚಾರಗಳನ್ನು ಚರ್ಚೆಯಿಂದ ಕೈಬಿಟ್ಟು ಈ ಮಸೂದೆಗೆ ಹಚ್ಚಿನ ಮಹತ್ವ ನೀಡಿ ಮಂಡಿಸಲು ಅವಕಾಶ ನೀಡಿದರು ಎಂದು ಕಿಡಿಕಾರಿದ್ದಾರೆ.

ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಎಷ್ಟು ಬಾರಿ ಮನವಿ ಮಾಡಿದರೂ ಅವರು ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಚರ್ಚೆಗೆ ಅವಕಾಶವನ್ನೇ ನೀಡದೆ ಮಸೂದೆಗೆ ತರಾತುರಿಯಲ್ಲಿ ಅನುಮೋದನೆ ಪಡೆಯುವ ಅಗತ್ಯವೇನಿತ್ತು? ಇದೇನು ಸಾರ್ವಜನಿಕ ತುರ್ತು ವಿಷಯವಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.

ಕೆಐಎಡಿಬಿ ಜಮೀನನ್ನು ಕಡಿಮೆ ಬೆಲೆಗೆ ಸೆಸ್ ಸಂಸ್ಥೆಗೆ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚಿನ ನಷ್ಟವಾಗಲಿದೆ. ಅಂದರೆ ಇದು ರಾಜ್ಯದ ಜನರಿಗಾದ ನಷ್ಟು. ಯಾರೋ ಮನುವಾದಿಗಳು ಶಿಕ್ಷಣ ಸಂಸ್ಥೆ ಆರಂಭಿಸಲು ರಾಜ್ಯದ ಜನರು ಏಕೆ ನಷ್ಟ ಅನುಭವಿಸಬೇಕು ಎಂದು ಕೇಳಿದ್ದಾರೆ.

ಇದು ರಾಜ್ಯ ಸರ್ಕಾರದ ಸ್ವಜನಪಕ್ಷಪಾತಿ ನಿರ್ಣಯವಾಗುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಭೂಮಿ ನೀಡುವ ನಿರ್ಣಯವನ್ನು ರದ್ದುಪಡಿಸಬೇಕು ಹಾಗೂ ಸೆಸ್ ಸಂಸ್ಥೆಗೆ ವಿಶ್ವವಿದ್ಯಾಲಯ ಆರಂಭಿಸಲು ಯಾವ ಅರ್ಹತೆಯೂ ಇಲ್ಲ. ಆದ್ದರಿಂದ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular