ಅಕ್ರಮವಾಗಿ ಕಟ್ಟಿರುವ ದೇವಾಲಯಗಳ ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಧಾರ್ಮಿಕ ರಚನೆಗಳ ರಕ್ಷಣಾ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದೆ.
ಸಾವಿರಾರು ಕಾನೂನುಬಾಹಿರ ದೇವಾಲಯಗಳು ಮತ್ತು ಪವಿತ್ರ ಸ್ಥಳಗಳ ಧ್ವಂಸಗೊಳಿಸುವ ಕಾರ್ಯಾಚರಣೆಗೆ ಬಿಜೆಪಿ ಸರ್ಕಾರ ಮುಂದಾಗುತ್ತಿದ್ದಂತೆಯೇ ವಿರೋಧಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹೀಗಾಗಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, “ಹಿಂದೂ ಮಹಾಸಭಾ ಮತ್ತು ಹಿಂದೂ ಜಾಗರಣ ವೇದಿಕೆಯಂತಹ ಬಲಪಂಥೀಯ ಗುಂಪುಗಳ ಒತ್ತಡ ಮತ್ತು ಭಯಕ್ಕೆ ಮಣಿದ ಸರ್ಕಾರ ಬಲವಂತವಾಗಿ ಈ ಮಸೂದೆಯನ್ನು ಮಂಡಿಸಿದೆ ಎಂದು ಆರೋಪಿಸಿದ್ದಾರೆ.
‘ಹಿಂದೂ ಗುಂಪುಗಳು ಆಕ್ರೋಶಗೊಂಡಿರುವುದಕ್ಕೆ ನೀವು ಈಗ ಮಸೂದೆ ಮಂಡಿಸುತ್ತಿದ್ದೀರಿ. ಆದರೆ ನಿಮ್ಮ ಸರ್ಕಾರವೇ ದೇವಾಲಯಗಳ ಧ್ವಂಸ ಮಾಡಿದ್ದು’ ಎಂದು ಹೇಳಿದರು.
ಮೈಸೂರು ಜಿಲ್ಲೆ ನಂಜನಗೂಡು ಹುಚ್ಚಗನಿ ಮಹಾದೇವಮ್ಮ ದೇವಾಲಯವನ್ನು ಅಧಿಕಾರಿಗಳು ಧ್ವಂಸಗೊಳಿಸಿದರು. ಈ ದೇವಾಲಯ ಧ್ವಂಸದ ಸಂದರ್ಭದಲ್ಲೇ ಸರ್ಕಾರ ಅರಿತುಕೊಳ್ಳಬೇಕಾಗಿತ್ತು ಎಂದರು.
ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪುರ್ ಮಾತನಾಡಿ, ಹಿಂದಿನ ಸರ್ಕಾರಗಳು ರಸ್ತೆ ಪಕ್ಕದ ಅನಧಿಕೃತ ದೇವಾಲಯಗಳನ್ನು ಕೆಡವಿ ಹಾಕಿವೆ. ಹಾಗಾಗಿ ಅವುಗಳನ್ನು ಪುನಃ ಕಟ್ಟುವ ಬಗ್ಗೆಯೂ ಮಸೂದೆಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಮಾತನಾಡಿ “ವಿದೇಶಿಯರು ಇಲ್ಲಿಗೆ ಬಂದು ದೇವಾಲಯ ಧ್ವಂಸಗೊಳಿಸಿ ಲೂಟಿ ಮಾಡಿದರು ಎಂದು ಇತಿಹಾಸದಲ್ಲಿ ನಾವು ಓದಿದ್ದೇವೆ. ಈಗ ನಮ್ಮ ಮಕ್ಕಳು ಬಿಜೆಪಿ ದೇವಾಲಯಗಳನ್ನು ಧ್ವಂಸಗೊಳಿಸಿದೆ ಎಂಬುದನ್ನು ಓದಬೇಕಾಗಿದೆ ಎಂದು ವ್ಯಂಗ್ಯವಾಡಿದರು.


