ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಾಲಿ ಲೋಕಸಭಾ ಸದಸ್ಯ ಸುಪ್ರಿಯೋ ಬಾಬೂಲ್ ಇಂದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಸಂಸದ ಡೆರೇಕ್ ಒಬ್ರಿಯನ್ ಅವರು ಸುಪ್ರಿಯೋ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಇದೊಂದು “ಮಾಸ್ಟರ್ ಸ್ಟ್ರೋಕ್” ಎಂದು ಇತ್ತೀಚೆಗಷ್ಟೇ ಟಿಎಂಸಿ ಸೇರಿದ್ದ ಸುಸ್ಮಿತ ದೇವ್ ಟ್ವೀಟ್ ಮಾಡಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಉತ್ತಮ ಸಮಾಜ ಮತ್ತು ಉತ್ತಮ ಆಡಳಿತಕ್ಕಾಗಿ ಕೆಲಸ ಮಾಡೋಣ ಎಂದು ಸುಸ್ಮಿತ ದೇವ್ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಬೆಂಬಲಿಗರು ಸುಪ್ರೀಯೋ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ.
ಟಿಎಂಸಿ ಸೇರಿದ ಬಳಿಕ ಮಾತನಾಡಿದ ಸುಪ್ರಿಯೋ, ಹಲವು ಬಿಜೆಪಿ ನಾಯಕರೊಂದಿಗೆ ಭಿನ್ನಾಭಿಪ್ರಾಯಗಳು ಇದ್ದವು. ಪಶ್ಚಿಮ ಬಂಗಾಳದ ಉಪಚುನಾವಣೆ ಕುರಿತಂತೆ ಬಿಜೆಪಿ ನಾಯಕರೊಂದಿಗೆ ಗುದ್ದಾಟ ನಡೆಸಬೇಕಾಗಿತ್ತು. ನನಗೆ ಟಿಎಂಸಿ ಸೇರುವ ಯೋಜನೆ ಇರಲಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದ್ದ ಸುಪ್ರಿಯೋ ಬಾಬೂಲ್, ರಾಜಕೀಯ ತೊರೆಯುವುದಾಗಿ ಹೇಳಿದ್ದರು. ಹಾಡುಗಾರ ಕಮ್ ರಾಜಕಾರಣಿ ಸುಪ್ರಿಯೋ ಇದೀಗ ಟಿಎಂಸಿ ಸೇರ್ಪಡೆಯಾಗಿರುವುದು ಬಿಜೆಪಿಗೆ ಶಾಕ್ ನೀಡಿದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.