ಆಫ್ಘಾನಿಸ್ತಾನದ ಸಂಗ್ರಹರ್ ಪ್ರಾಂತ್ಯದಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ರಾಜಧಾನಿ ಕಾಬೂಲ್ ನಲ್ಲೂ ಬಾಂಬ್ ಸ್ಫೋಟಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಎರಡು ಕಡೆ ಬಾಂಬ್ ಸ್ಫೋಟಿಸಿದ್ದು ಯಾವುದೇ ಸಂಘಟನೆಗಳು ಇದುವರೆಗೆ ಸ್ಫೋಟದ ಜವಾಬ್ದಾರಿ ಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಅಲ್ಲಲ್ಲಿ ಘರ್ಷಣೆಗಳನ್ನು ಹುಟ್ಟುಹಾಕುತ್ತಿದೆ ಎಂದು ವರದಿಗಳು ತಿಳಿಸಿವೆ.
ನಂಗ್ರಹರ್ ಪ್ರಾಂತ್ಯದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ಸ್ಥಳದಲ್ಲೇ ಮೂರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸತ್ತವರ ಮೃತದೇಹಗಳು ಮತ್ತು ಗಾಯಾಳುಗಳನ್ನು ಕೂಡಲೇ ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಕಾಬೂಲ್ ನಲ್ಲಿ ಐಇಡಿ ಸ್ಪೋಟ ಸಂಭವಿಸಿದೆ. ಕಾಬೂಲ್ ನ ಪಿಡಿ13 ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಈ ನಡುವೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಆಫ್ಘಾನಿಸ್ತಾನದಲ್ಲಿ ಮೂರು ಉಗ್ರ ಸಂಘಟನೆಗಳು ಪಾಕ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.
ತಾಲಿಬಾನ್ ಸರ್ಕಾರ ರಚನೆಗೆ ಅಮೆರಿಕ ಅಂಗೀಕಾರ ನೀಡಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ತಾಲಿಬಾನ್ ಜೊತೆ ಅಮೆರಿಕಾ ಮಾತುಕತೆ ಕಡೆಸಬೇಕು ಎಂದು ಹೇಳಿದ್ದಾರೆ.