ಪೆಟ್ರೋಲ್, ಡಿಸೆಲ್ ಮತ್ತು ಗ್ಯಾಸ್ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ತೆರಳಿ ಪ್ರತಿಭಟನೆ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ತಮ್ಮ ನಿವಾಸಗಳಿಂದ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಬಂದರು. ಉಭಯ ನಾಯಕರೇ ಎತ್ತಿಬಂಡಿಗಳನ್ನು ಹೊಡೆದುಕೊಂಡು ಹೋದರು.
ಎತ್ತಿನಗಾಡಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತೆರಳುತ್ತಿದ್ದರೆ ನೂರಾರು ಕಾರ್ಯಕರ್ತರು ತಮ್ಮ ನಾಯಕರಿಗೆ ಜಯ ಘೋಷ ಹಾಕಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ಸರ್ಕಾರದ ಬೆಲೆಯೇರಿಕೆ ನೀತಿಯನ್ನು ಖಂಡಿಸಿ ಇಂದು ನನ್ನ ನಿವಾಸದಿಂದ ವಿಧಾನಸೌಧದ ವರೆಗೆ ಎತ್ತಿನಗಾಡಿ ಮೂಲಕ ತೆರಳಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು ಮೊದಲ ದಿನವೇ ಕಾಂಗ್ರೆಸ್ ನಾಯಕರು ಬೆಲೆ ಏರಿಕೆ ವಿರುದ್ಧ ಭಿನ್ನ ಪ್ರತಿಭಟನೆ ವ್ಯಕ್ತಪಡಿದ್ದಾರೆ. ಕಾಂಗ್ರೆಸ್ ನಾಯಕರು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಬರುವ ಮೂಲಕ ಸಾವಿರಾರು ಜನರ ಗಮನ ಸೆಳೆದರು.


