Friday, September 20, 2024
Google search engine
Homeಮುಖಪುಟಪಾಲಿಕೆ ಫಲಿತಾಂಶ ಸರ್ಕಾರದ ಪರವೋ, ವಿರುದ್ಧವೋ ಜಗದೀಶ್ ಶೆಟ್ಟರ್ ಹೇಳಬೇಕು - ಡಿ.ಕೆ.ಶಿವಕುಮಾರ್

ಪಾಲಿಕೆ ಫಲಿತಾಂಶ ಸರ್ಕಾರದ ಪರವೋ, ವಿರುದ್ಧವೋ ಜಗದೀಶ್ ಶೆಟ್ಟರ್ ಹೇಳಬೇಕು – ಡಿ.ಕೆ.ಶಿವಕುಮಾರ್

ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರ ಕ್ಷೇತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಬಂದಿರುವ ಫಲಿತಾಂಶ ಸರ್ಕಾರದ ವಿರುದ್ದವಾಗಿದೆಯೋ, ಪರವಾಗಿದೆಯೋ ಎಂಬುದನ್ನು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

15 ವರ್ಷದಿಂದಲೂ ಬಿಜೆಪಿ ಹು-ಧಾರವಾಡದಲ್ಲಿ ಆಡಳಿತ ನಡೆಸಿದೆ. ಹಾಲಿ, ಮಾಜಿ ಮುಖ್ಯಮಂತ್ರಿಗಳ ತವರು ಕ್ಷೇತ್ರ. ರಾಜ್ಯ ಸರ್ಕಾರ ತನಗೆ ಅನುಕೂಲವಾಗುವಂತೆ ಮೀಸಲಾತಿಯನ್ನು ಪ್ರಕಟಿಸಿತು. ಆದರೂ ಬಿಜೆಪಿ ಶೇ. 38.10ರಷ್ಟು ಮತ ಪಡೆದರೆ, ಕಾಂಗ್ರೆಸ್ ಶೇ.36.8ರಷ್ಟು ಮತ ಪಡೆದಿದೆ. ಅಂದರೆ ಕಾಂಗ್ರೆಸ್ ಗೆ 33 ಸ್ಥಾನ ಮತ್ತು ಬಿಜೆಪಿಗೆ 39 ಸ್ಥಾನಗಳು ಲಭಿಸಿವೆ. ಕಾಂಗ್ರೆಸ್ ಗೆ ಹೆಚ್ಚು ಮತ ಸಿಕ್ಕಿದೆ ಎಂದರು.

ಪಾಲಿಕೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಅಂಥ ಸಂದರ್ಭದಲ್ಲೂ ಜನರು ಉತ್ತಮ ತೀರ್ಪು ನೀಡಿದ್ದಾರೆ. ಕೇವಲ ಶೇ. 3ರಷ್ಟು ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಬಿದ್ದಿವೆ. ಹಾಗಾಗಿ ಇಲ್ಲಿನ ಫಲಿತಾಂಶದ ಬಗ್ಗೆ ನಾನು ಸರ್ಟಿಫಿಕೇಟ್ ನೀಡುವುದಿಲ್ಲ. ಬಿಜೆಪಿ ಮುಖಂಡರೇ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಲೇವಡಿ ಮಾಡಿದರು.

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ನಾವು ಮಾಡಿದ ತಪ್ಪಿನಿಂದ ನಮಗೆ ಹಿನ್ನಡೆಯಾಗಿರುವುದು ನಿಜ. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಐವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಟಿಕೆಟ್ ನೀಡದೆ ನಮಗೆ ಬರಬೇಕಾಗಿದ್ದ ಸ್ಥಾನಗಳು ಕಡಿಮೆಯಾಗಿವೆ. ಈಗಲೂ ಆ ಐವರು ಪಕ್ಷೇತರ ಸದಸ್ಯರ ಕಾಂಗ್ರೆಸ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಕಲಬುರಗಿ, ಹುಬ್ಬಳ್ಳಿ-ಧಾರವಾಡ, ತರೀಕೆರೆಯಲ್ಲಿ ಬಂದಿರುವ ಫಲಿತಾಂಶ ಸಮಾಧಾನಕರವಾಗಿದೆ. ಆದರೂ ದೃತಿಗೆಡದೆ ಎಲ್ಲರೂ ಕೆಲಸ ಮಾಡಬೇಕು. ನಾವು ಜನರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇವೆ. ಜನರ ಸೇವೆ ಮುಂದುವರಿಸುತ್ತೇವೆ. ನಮ್ಮ ಕಾರ್ಪೋರೇಟರ್ ಗಳು ಜನರ ನಡುವೆ ಕೆಲಸ ಮಾಡುತ್ತಾರೆ. ಸೋಲು-ಗೆಲುವು ಮುಖ್ಯವಲ್ಲ. ಜನರ ಸೇವೆಯೇ ಮುಖ್ಯ ಎಂದು ತಿಳಿಸಿದರು.

ಕೊರೊನ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಸಂಭವಿಸಿರುವ ಹಾನಿಗೆ ನಷ್ಟಪರಿಹಾರ ಕೊಡಬೇಕು. ರೈತರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಮಹದಾಯಿ, ಕೃಷ್ಣ, ಮೇಕೆದಾಟು ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಯಾವ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆಂಬುದು ಗೊತ್ತು. ಹಾಗಾಗಿ ಆ ವಿಷಯದ ಬಗ್ಗೆ ಅವರನ್ನೇ ಕೇಳಿ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular