ಕೇಂದ್ರ ಸರ್ಕಾರ ಗೋಧಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಕ್ರೂರ ಜೋಕ್ ಬಿಟ್ಟರೆ ಬೇರೇನೂ ಅಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ನಾಯಕ ಜೈಶೀರ್ ಶರ್ಗಿಲ್ ಮಾತನಾಡಿ ತೈಲ ಬೆಲೆ ಹೆಚ್ಚಳವಾಗಿರುವುದಕ್ಕೆ ದೇಶ ಸಾಕ್ಷಿಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗೋಧಿಗೆ ಕೇವಲ ಶೇ.2ರಷ್ಟು ಬೆಂಬಲ ಬೆಲೆ ಘೋಷಿಸಿರುವುದು ಹಾಸ್ಯಾಸ್ಪದ ಎಂದು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲೇ ಈಗ ತೈಲ ಬೆಲೆ ಹೆಚ್ಚಳವಾಗಿದೆ. 12 ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಕಡಿಮೆಯಾಗಿದೆ. ಬಿಜೆಪಿಗೆ ರೈತರಿಂದ ಕಸಿದುಕೊಳ್ಳುವುದು ಮತ್ತು ಬೆಂಬಲ ನೀಡದೇ ಇರುವುದರಲ್ಲಿ ನಂಬಿಕೆ ಇದೆ. ಆಹಾರ ಧಾನ್ಯಗಳ ಬೆಲೆಯೂ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಮಾಧ್ಯಮ ವಕ್ತಾರ ರಣಧೀಪ್ ಸುರ್ಜಿವಾಲ ಮಾತನಾಡಿ, ಕೃಷಿ ಉತ್ಪಾದನೆಗೆ ಹಾಕಿರುವಷ್ಟು ಹಣವೂ ಕೂಡ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಿಲ್ಲ. ಕಬ್ಬಿಗೆ ಕೇವಲ 1.75ರಷ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಿದೆ. ಗೋಧಿಗೆ ಶೇ.2ರಷ್ಟು ಮಾತ್ರ ಬೆಂಬಲ ಬೆಲೆ ಘೋಷಣೆಯಾಗಿದೆ. ಇದರಿಂದ ರೈತರಿಗೆ ಪ್ರಯೋಜನವಿಲ್ಲ ಎಂದು ಟೀಕಿಸಿದರು.
ಇತರೆ ಕೃಷಿ ಉತ್ಪನ್ನಗಳಿಗೆ ಶೇ.10ಕ್ಕಿಂತ ಕಡಿಮೆ ಬೆಂಬಲ ಬೆಲೆ ನಿಗದಿಯಾಗಿದೆ. ಗೊಬ್ಬರ, ಕ್ರಿಮಿನಾಶಕ, ಗೊಬ್ಬರದ ಬೆಲೆಯೂ ಹೆಚ್ಚಳವಾಗಿದ್ದು ರೈತರು ಸಂಕಟ ಎದುರಿಸುವಂತಾಗಿದೆ. ಎಣ್ಣೆಕಾಳು, ಬೇಳೆ ಮೊದಲಾದ ಆಹಾರ ಪದಾರ್ಥಗಳ ಬೆಲೆಯಲ್ಲಿಯ ಏರಿಕೆ ಆಗಿರುವುದರಿಂದ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಿಂದ ಪ್ರಯೋಜನವಿಲ್ಲ ಎಂದು ಹೇಳಿದರು.