ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ‘ಪ್ರತಿಬಡಿ ಕಲಂ’ ದಿನ ಪತ್ರಿಕೆ ಕಚೇರಿಯ ಮೇಲೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ದಾಳಿ ಮಾಡಿದ್ದು ನಾಲ್ವರು ಪತ್ರಕರ್ತರಿಗೆ ಗಾಯಗಳಾಗಿವೆ. ಕಚೇರಿ ಹೊರಗೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿಹಚ್ಚಿದ್ದು ಸುಟ್ಟು ಭಸ್ಮವಾಗಿವೆ. ಬುಧವಾರ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆದಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬಿಜೆಪಿ ಕಾರ್ಯಕರ್ತರು ಪ್ರತಿಬಡಿ ಕಲಂ ಕಚೇರಿಯ ಸ್ವತ್ತಿಗೆ ಹಾನಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೈದಿದ್ದಾರೆ. ಕಾರು, ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸಂಪಾದಕ ಮತ್ತು ಪ್ರಕಾಶಕ ಅನಲ್ ರಾಯ್ ಚೌದರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಪತ್ರಿಕಾ ಕಚೇರಿ ಮೇಲಿನ ದಾಳಿಗೆ ತೃಣಮೂಲ ಕಾಂಗ್ರೆಸ್ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಬರ್ಬರವಾಗಿ ದಾಳಿ ಮಾಡಲಾಗಿದೆ. ಇದು ಖಂಡನೀಯ. ನಾವು ಮಾಧ್ಯಮ ಬ್ರಾತೃತ್ವದ ಪರ ನಿಲ್ಲುತ್ತೇವೆ ಎಂದು ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಅಗರ್ತಲಾ ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರಣಬ್ ಸರ್ಕಾರ್, ಸರ್ಕಾರವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ 12 ಗಂಟೆಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳಿಗೆ ಪರಿಹಾರ ನೀಡದಿದ್ದರೆ ಮತ್ತು ದುಷ್ಕರ್ಮಿಗಳನ್ನು ಕಾನೂನಿನ ಅಡಿಯಲ್ಲಿ ತರದಿದ್ದರೆ ಬೃಹತ್ ಚಳವಳಿಯನ್ನು ಆಯೋಜಿಸಲಾಗುವುದು ಎಂದು ಸರ್ಕಾರ್ ಎಚ್ಚರಿಕೆ ನೀಡಿದ್ದಾರೆ.