ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಬೆಳೆಯಲು ಅವಕಾಶ ದೊರೆತು ಇನ್ನೇನು ಶಾಸಕರಾಗಬೇಕು ಎಂಬ ಹಂಬಲದಲ್ಲಿದ್ದಾಗ ಡಿ.ಕೆ.ಶಿವಕುಮಾರ್ ಅವರ ಚಿತಾವಣೆಯಿಂದಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ ಎಂದು ಜೆಡಿಎಸ್ ಮುಖಂಡ ಪಿ.ಎನ್.ಕೃಷ್ಣಮೂರ್ತಿ ಆಕ್ರೋಶ ಹೊರಹಾಕಿದರು.
ತುಮಕೂರು ತಾಲೂಕು ಲಿಂಗಾಪುರದಲ್ಲಿ ಉಪ್ಪಿನಕೊಳಗ ಒಕ್ಕಲಿಗ ಸೇವಾ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ತತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ 2008 ಮತ್ತು 2018ರಲ್ಲಿ ಶಾಸಕರಾಗುವ ಅವಕಾಶ ಬಂತು. ಒಮ್ಮೆ ರಾಜರಾಜೇಶ್ವರಿ, ಮತ್ತೊಮ್ಮೆ ಯಲಹಂಕ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ನನಗೆ ಅಡ್ಡಿಯಾಗಿ ಗೆಲುವು ಸಾಧಿಸದಂತೆ ನೋಡಿಕೊಂಡರು ಎಂದು ಆರೋಪಿಸಿದರು.
ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ನನ್ನನ್ನು ಬೆಳೆಯಲು ಬಿಡಲಿಲ್ಲ. ಇದರಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದೆ. ಜೆಡಿಎಸ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ಚನ್ನಾಗಿ ನೋಡಿಕೊಂಡರು ಎಂದು ಹೇಳಿದರು.
2028ಕ್ಕೆ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ನಾನು ಸ್ಪರ್ಧಿಸುಸುತ್ತೇನೆ. ಆಗ ಜನಾಂಗ ನನ್ನೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಜನಾಂಗದ ಮತ್ತು ಕ್ಷೇತ್ರದ ಜನರ ಅಭಿವೃದ್ಧಿ ಗಾಗಿ ಕೊರಟಗೆರೆ ತಾಲ್ಲೂಕಿನ 6 ಹೋಬಳಿಗಳಲ್ಲಿಯೂ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಎರಡು ಹೋಬಳಿಗಳಲ್ಲಿ ಕಾಮಗಾರಿ ಆರಂಭವಾಗಿದೆ. ಉಳಿದ ನಾಲ್ಕು ಹೋಬಳಿಗಳಲ್ಲಿ ಜಾಗ ಗುರುತಿಸಿ ಕಾಮಗಾರಿ ಆರಂಭಿಸಲಿದ್ದೇನೆ. ಉಪ್ಪಿನಕೊಳಗ ಒಕ್ಕಲಿಗ ಜನಾಂಗದ ಪ್ರತಿಭಾ ಪುರಸ್ಕಾರ ನಿಧಿಗೆ 5 ಲಕ್ಷ ರೂಪಗಳನ್ನು ನೀಡುವುದಾಗಿ ಪಿ.ಎನ್.ಕೃಷ್ಣಮೂರ್ತಿ ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳಿಧರ ಹಾಲಪ್ಪ ಮಾತನಾಡಿ, ಓರ್ವ ಪೌರಕಾರ್ಮಿಕನ ಮಗ ಇಂದು ಕರ್ನಾಟಕ ಸರಕಾರದ ಮುಜರಾಯಿ ಸಚಿವರಾಗಿದ್ದಾರೆ. ಅವರ ನಿರಂತರ ಪರಿಶ್ರಮ ಮತ್ತು ಅವರು ಗಳಿಸಿದ ವಿದ್ವತ್ತು ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿದೆ, ಅವರ ರೀತಿಯಲ್ಲಿ ನೀವುಗಳು ಸಹ ಸತತ ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸುವಾಗಬೇಕು. ಯುಪಿಎಸ್ ಸಿ,ಕೆಪಿಎಸ್ಸಿ ಪರೀಕ್ಷೆಗಳನ್ನು ಎದರಿಸಿ, ಆಯಕಟ್ಟಿನ ಹುದ್ದೆಗಳಲ್ಕಿ ಕುಳಿತು ಜನಾಂಗಕ್ಕೆ ನೆರವಾಗಬೇಕೆಂದು ತಿಳಿಸಿದರು.
ಉಪ್ಪಿನಕೊಳಗ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜೆ.ಎನ್.ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಒಲಿಗರ ಕೇಂದ್ರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಎನ್.ಕೃಷ್ಣಮೂರ್ತಿ, ಬಿ.ಆರ್.ಜಯರಾಮ್, ವಿ.ಜಿ.ಶ್ರೀ ನಿವಾಸಮೂರ್ತಿ, ಕೊರಟಗೆರೆ ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿದರು.


