Sunday, November 8, 2026
Google search engine
Homeಮುಖಪುಟಬಹುಸಂಖ್ಯಾತ ಆಸ್ತಿಕ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲ

ಬಹುಸಂಖ್ಯಾತ ಆಸ್ತಿಕ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲ

ಚಳವಳಿ, ಚಿಂತನೆ ಸೇರಿದಂತೆ ಚುನಾವಣಾ ರಾಜಕಾರಣದ ಹೊರತಾಗಿಯೂ ರಾಜಕೀಯ ಚಟುವಟಿಕೆಗಳು ನಡೆಯುತ್ತವೆ. ಆದರೆ, ನೇರ ಚುನಾವಣಾ ರಾಜಕಾರಣವನ್ನು ಕಡೆಗಣಿಸುವ ಎಲ್ಲ ರಾಜಕೀಯ ಪ್ರಯತ್ನಗಳೂ ಅಪೂರ್ಣ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ. ಎಚ್.ವಿ. ವಾಸು ತಿಳಿಸಿದರು.

ತುಮಕೂರು ನಗರದ ಹ್ಯಾಶ್‌ಟ್ಯಾಗ್ ಕೆಫೆಯಲ್ಲಿ ಜಾಗೃತ ಕರ್ನಾಟಕ ಸಂಘಟನೆಯ ರಾಜ್ಯ ಪ್ರವಾಸದ ಭಾಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆದರ್ಶಯುತ ರಾಜಕಾರಣ ಪ್ರಾಯೋಗಿಕವಲ್ಲ ಎಂಬ ಭಾವನೆ ಮೂಡಿಸುವಂತಹ ಹಲವು ಪ್ರಯೋಗಗಳು ನಡೆದಿವೆ. ರಾಜಕೀಯವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳದೆ ಸದಾಶಯದಿಂದ ಮಾಡಿದ ಕೆಲವು ಪ್ರಯತ್ನಗಳು ಎಡವಟ್ಟಾಗಿವೆ. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳನ್ನು ಕೇವಲ ಜನವಿರೋಧಿ ಸಂಘಟನೆಗಳೆಂದು ಪರಿಗಣಿಸುವುದೂ ಅರಾಜಕೀಯ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಪ್ರಯೋಗದ ಅಗತ್ಯವನ್ನು ಮನಗಂಡು ಸಮಾನ ಮನಸ್ಕರು ಸೇರಿ ಜಾಗೃತ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿದ್ದೇವೆ. ರಾಜಕೀಯ ಆಸಕ್ತಿ ಹೊಂದಿರುವ ಎಲ್ಲರೂ ಸಂಘಟನೆಯ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಬಲಪಂಥೀಯ ಶಕ್ತಿಗಳು ಬೆಳೆಯುತ್ತಿರುವುದಕ್ಕೆ ಜನರಲ್ಲಿ ಪರಸ್ಪರರ ನೋವು, ಸಂಕಷ್ಟ ಮತ್ತು ತಾರತಮ್ಯದ ವಿರುದ್ಧ ಸ್ಪಂದಿಸುವ ಮನೋಭಾವ ಕಡಿಮೆಯಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಇನ್ನೊಬ್ಬರಿಗೆ ಆಗುವ ಅನ್ಯಾಯವನ್ನು ತಮ್ಮ ಸಮಸ್ಯೆಯೆಂದು ಭಾವಿಸಿ ವಿರೋಧಿಸದಿದ್ದರೆ ಸೋದರತೆ ಮತ್ತು ಮೈತ್ರಿಯ ಮೌಲ್ಯಗಳು ಬೆಳೆಸಲು ಸಾಧ್ಯವಿಲ್ಲ. ಮನುಷ್ಯರನ್ನು ಒಳಗಿನಿಂದ ಬದಲಿಸಿ ಸಮಾಜವನ್ನು ಮಾನವೀಯಗೊಳಿಸುವ ಆಧ್ಯಾತ್ಮದ ಅಗತ್ಯವಿದೆ. ಬುದ್ಧ, ಬಸವಣ್ಣ, ಪ್ರವಾದಿ ಮುಹಮ್ಮದ್, ಏಸು ಕ್ರಿಸ್ತ, ಗಾಂಧಿ, ಅಂಬೇಡ್ಕರ್ ಹಾಗೂ ಕುವೆಂಪು ಅವರ ಚಿಂತನೆಗಳಲ್ಲಿ ಇಂತಹ ಮಾನವೀಯ ಅಧ್ಯಾತ್ಮವನ್ನು ಕಾಣಬಹುದು. ಉತ್ತಮ ರಾಜಕಾರಣ ನಿರ್ಮಾಣಕ್ಕೂ ಈ ಮೌಲ್ಯಗಳು ಅನಿವಾರ್ಯ ಎಂದು ಹೇಳಿದರು.

ದೇಶದ ಪ್ರಗತಿಪರ ಚಿಂತನೆಗಳು ಮತ್ತು ಸಂಘಟನೆಗಳು ಸಾಮಾಜಿಕ ಬದಲಾವಣೆಗೆ ಮಹತ್ವದ ಕೊಡುಗೆ ನೀಡಿವೆ. ಆದರೆ, ಅವುಗಳಲ್ಲಿ ಬಹುತೇಕರು ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳಲು ತಡಮಾಡಿದ್ದು ಒಂದು ಸಮಸ್ಯೆಯಾಗಿದೆ. ಮತ್ತೊಂದೆಡೆ, ವಿಚಾರವಾದಿಗಳೆಂದು ಗುರುತಿಸಿಕೊಂಡವರು ಬಹುಸಂಖ್ಯಾತ ಆಸ್ತಿಕ ಜನರ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಆಚರಣಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಧರ್ಮದ ಹೆಸರಿನಲ್ಲಿ ಅಧಾರ್ಮಿಕ ಹಾಗೂ ಜೀವವಿರೋಧಿ ಚಿಂತನೆಗಳು ಬೆಳೆಯಲು ಇದೂ ಒಂದು ಕಾರಣವಾಗಿದೆ. ಇಂತಹ ಶಕ್ತಿಗಳ ವಿರುದ್ಧ ಜೀವಪರ ಚಿಂತನೆಯನ್ನು ಬೆಳೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹಿರಿಯ ಹೋರಾಟಗಾರ ದೊರೈರಾಜು, ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ. ನರಸಿಂಹಮೂರ್ತಿ, ಸುಫಿಯಾ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್, ಉಪನ್ಯಾಸಕ ಧನುಷ್ ಎಚ್. ಶೇಖರ್, ಸಂಶೋಧಕರಾದ ರಾಹುಲ್, ಗಂಗಾಧರ್ ಬಾಣಸಂದ್ರ, ನವೀನ್ ಪೂಜಾರಹಳ್ಳಿ, ಜಾಗೃತ ಕರ್ನಾಟಕದ ದರ್ಶನ್ ಅಗ್ರಹಾರ, ಮಂಜುಳಾ, ರಾಜ್ಯ ಸಮಿತಿ ಸದಸ್ಯರಾದ ಆದಂ ಖಾನ್, ಅನಿಲ್ ಕುಮಾರ್ ಚಿಕ್ಕದಾಳವಟ್ಟ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular