Wednesday, October 28, 2026
Google search engine
Homeಮುಖಪುಟಗೌರಿಬಿದನೂರಿನ ಹಿರಿಯ ವಕೀಲ ಸಣ್ಣಕ್ಕಿ ವೆಂಕಟೇಶ್ ಮೇಲೆ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ವಕೀಲರ ಪ್ರತಿಭಟನೆ

ಗೌರಿಬಿದನೂರಿನ ಹಿರಿಯ ವಕೀಲ ಸಣ್ಣಕ್ಕಿ ವೆಂಕಟೇಶ್ ಮೇಲೆ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ವಕೀಲರ ಪ್ರತಿಭಟನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಸಣ್ಣಕ್ಕಿ ವೆಂಕಟೇಶ್ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಕೀಲರು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದು ತುಮಕೂರು ಜಿಲ್ಲಾ ವಕೀಲರ ಸಂಘದ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆಂಪರಾಜಯ್ಯ, ವಕೀಲರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಕೀಲರ ಸಂರಕ್ಷಣ ಕಾಯ್ದೆ ಇನ್ನಷ್ಟು ಕಠಿಣಗೊಳಿಸಬೇಕು. ಈಗ ಕೇವಲ 3 ವರ್ಷ ಶಿಕ್ಷೆ ಇದ್ದು ಇದನ್ನು ಏಳು ವರ್ಷಕ್ಕೆ ವಿಸ್ತರಿಸಬೇಕು ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆಗಳು ಹೆಚ್ಚಳವಾಗುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಿರಿಯ ವಕೀಲ ಸಣ್ಣಕ್ಕಿ ವೆಂಕಟೇಶ್ ಅವರ ಮೇಲಿನ ಹಲ್ಲೆ ಇಡೀ ವಕೀಲರ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ವಕೀಲರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಎನ್.ನವೀನ್ ನಾಯಕ್ ಮಾತನಾಡಿ, ವಕೀಲರ ಮೇಲಿನ ಹಲ್ಲೆ ಅತ್ಯಂತ ಅಮಾನವೀಯವಾಗಿದ್ದು ಇದನ್ನು ಖಂಡಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ಸಹ ಸೌಹಾರ್ದತೆಯಿಂದ ಕಕ್ಷಿದಾರರು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು. ಅದು ಬಿಟ್ಟು ಏಕಾಏಕಿ ಹಲ್ಲೆ, ಕೊಲೆ ಪ್ರಯತ್ನ ಮಾಡುವುದು ತಪ್ಪು. ವಕೀಲರು ತಪ್ಪು ಮಾಡಿದರೆ ಅದಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಇದ್ದೇ ಇರುತ್ತದೆ. ಆದರೆ ಕಕ್ಷಿದಾರರು ತಾಳ್ಮೆ, ಸಹನೆಯಿಂದ ವರ್ತಿಸಿದರೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ವಕೀಲಾರದ ರಾಜೇಂದ್ರ, ರಾಮಾಂಜಿನಪ್ಪ, ಕೆ.ಎನ್. ಹರೀಶ್, ಮಲ್ಲಿಕಾರ್ಜುನ್ ಹಿರೇಹಳ್ಳಿ, ಕುಮಾರ್, ರವಿಕಿರಣ್, ಬಿ.ಆರ್.ವೆಂಕಟೇಶಮೂರ್ತಿ, ಶರಣ ಬಸವ, ಖಲೀಲ್, ಮಧು, ನವೀನ್, ತಿಪ್ಪೇಸ್ವಾಮಿ, ಈ.ಶಿವಣ್ಣ, ಜಗದೀಶ್, ರಮೇಶ್ ಮೊದಲಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular