ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಸೆಪ್ಟೆಂಬರ್ 5ರಂದು ಆಯೋಜಿಸಿರುವ ರೈತ ಮಹಾಪಂಚಾಯತ್ ಗೆ ಹರ್ಯಾಣದ ಪ್ರತಿಹಳ್ಳಿಗಳಿಂದ ರೈತರು ಹೊರಟಿದ್ದು, ರೈತರು ಪ್ರತಿಭಟನೆ ಆರಂಭಿಸಿದ 9 ತಿಂಗಳ ನಂತರ ಇದೊಂದು ಐತಿಹಾಸಿಕ ಬೃಹತ್ ಕಾರ್ಯಕ್ರಮವಾಗಲಿದೆ ಎಂದು ರೈತ ನಾಯಕರು ನಿರೀಕ್ಷೆ ಮಾಡಿದ್ದಾರೆ.
ಹರ್ಯಾಣದಿಂದ ರೈತರು ಹೊರಟಿರುವ ಉತ್ತರ ಪ್ರದೇಶದಲ್ಲಿ ಕೈಗೊಂಡಿರುವ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರ್ಯಾಲಿಯಲ್ಲಿ ರೈತರ ಬೃಹತ್ ಪ್ರದರ್ಶನ ವ್ಯಕ್ತವಾಗಲಿದೆ. ಹರ್ಯಾಣ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಖಂಡ ರಾಜ್ಯಗಳಿಂದ ರೈತರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತ್ ಕಿಸಾನ್ ಒಕ್ಕೂಟದ ನಾಯಕರು ಹೇಳಿದ್ದಾರೆ.
ಮುಜಫರ್ ನಗರದಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸುವ ಮೊದಲ ಹರ್ಯಾಣದಲ್ಲಿ ಒಂದೆಡೆ ಸೇರಿ ಅಲ್ಲಿಂದ ವಾಹನಗಳಲ್ಲಿ ರೈತರು ಹೊರಟು ಉತ್ತರ ಪ್ರದೇಶದ ಕಾಲನೌರ್ ಗಡಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಸೆಪ್ಟೆಂಬರ್ 5ರಂದು ರೈತ ಮಹಾಪಂಚಾಯತ್ ನಲ್ಲಿ ಭಾಗಿಯಾಗುವರು.
ಪತೇಹಬಾದ್ ಬಿಕೆಯು ಮುಖಂಡ ಮನ್ ದೀಪ್ ನತ್ವಾನ್ ಮಾತನಾಡಿ, ಪತೇಹಬಾದ್ ಜಿಲ್ಲೆಯಿಂದ ಸಾವಿರಾರು ರೈತರು ಭಾಗಿಯಾಗಲಿದ್ದು ಈ ಹಳ್ಳಿಗಳಿಗೆ ರ್ಯಾಲಿ ನಡೆಯುವ ಸ್ಥಳ 300 ಕಿಲೋ ಮೀಟರ್ ದೂರವಿದೆ. ಸಾಕಷ್ಟು ಸಂಖ್ಯೆಯಲ್ಲಿ ರೈತರು ಬಸ್ ಮೂಲಕ ತೆರಳಿ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮತ್ತಷ್ಟು ಮಂದಿ ರೈತರು ರೈಲುಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಒಗ್ಗಟ್ಟು ಪ್ರದರ್ಶನ ಮಾಡುವುದು, ಕೃಷಿ ಕಾಯ್ದೆಗಳನ್ನು ರದ್ದುಪಡಿಸದ ಬಿಜೆಪಿ ವಿರುದ್ಧ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಮತ ಚಲಾಯಿಸುವಂತೆ ಮಾಡುವುದು ಮತ್ತು ಹರ್ಯಾಣ ರೈತ ನಾಯಕರು ಉತ್ತರ ಪ್ರದೇಶದ ರೈತ ನಾಯಕರಿಗೆ ಬೆಂಬಲ ನೀಡುವುದು ರೈತ ಮಹಾಪಂಚಾಯತ್ ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
ಹರ್ಯಾಣದಿಂದ ಮಹಿಳೆಯರೂ ಕೂಡ ರ್ಯಾಲಿಯಲ್ಲಿ ಭಾಗಿಯಾಗಲಿದ್ದು ಈಗಾಗಲೇ ಮುಜಫರ್ ನಗರಕ್ಕೆ ತೆರಳುತ್ತಿದ್ದಾರೆ.
ನಮ್ಮೊಂದಿಗೆ ಆಹಾರವನ್ನು ತೆಗೆದುಕೊಂಡು ಹೋಗುತ್ತೇವೆ. ಉತ್ತರ ಪ್ರದೇಶದ ರೈತ ನಾಯಕರು ಸಮುದಾಯ ಆಹಾರವನ್ನು ಆಯೋಜಿಸಿದ್ದಾರೆ. ರ್ಯಾಲಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಕೃಷಿ ಕಾಯ್ದೆಗಳನ್ನು ರದ್ದುಪಡಿಸದ ಕೇಂದ್ರ ಸರ್ಕಾರಕ್ಕೆ ಪಶ್ಚಿಮಬಂಗಾಳ ಚುನಾವಣೆಯಲ್ಲಿ ಮೊದಲ ಡೋಸ್ ನೀಡಿದ್ದೇವೆ. ಉತ್ತರಪ್ರದೇಶ ಚುನಾವಣೆಯಲ್ಲಿ ಎರಡನೇ ಡೋಸ್ ನೀಡುತ್ತೇವೆ ಎಂದು ರೈತ ನಾಯಕರು ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ತರಖಂಡ, ಪಂಜಾಬ್, ಗೋವಾ, ಮಣಿಪುರದಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯೂ ರೈತರಿಂದ ವ್ಯಕ್ತವಾಗಿದೆ.


