ಆಫ್ಘನ್ ಮಹಿಳೆಯರು ‘ತಾಳಿ’ಬಾನು ಬಂಧನಕ್ಕೆ ಕೈವೊಡ್ಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಯರು ಕಟುಸಂಪ್ರದಾಯವಾದಿಗಳು. ಅದೇ ಕಾರಣಕ್ಕಾಗಿಯೇ ಶರಿಯಾ ಕಾನೂನುಗಳನ್ನು ಯಥಾವತ್ ಅನುಷ್ಠಾನಕ್ಕೆ ತರಲು ಸಿದ್ದತೆ ನಡೆಸಿದ್ದಾರೆ. ಶರಿಯ ಅಥವಾ ಇಸ್ಲಾಮಿಕ್ ಹೆಸರಿನ ಕಾನೂನು ಜಾರಿಯಾದರೆ ಆಫ್ಘನ್ ಮಹಿಳೆ ತೀವ್ರ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ದಶಕಗಳ ಕಾಲ ಸ್ವತಂತ್ರ ಹಕ್ಕಿಗಳಂತೆ ಹಾರುತ್ತಿದ್ದ ಅಲ್ಲಿನ ಮಹಿಳೆಯರು ಅಕ್ಷರಶಃ ಪಂಜರ ಸೇರುವರು. ಇದೊಂದು ರೀತಿಯ ‘ಗೃಹಿಣಿಗೃಹಮುಚ್ಚತೆ’ ಎಂಬಂತೆ ಮನೆಯಲ್ಲಿ ನಾಲ್ಕು ಗೋಡೆಯ ನಡುವೆ ಅಡುಗೆ ಮಾಡಿಕೊಂಡು ಪುರುಷ ಪ್ರಾಧಾನ್ಯ ವ್ಯವಸ್ಥೆ ಹೇರುವ ಎಲ್ಲಾ ನಿಯಮಗಳನ್ನು ಒಪ್ಪಿಕೊಳ್ಳಬೇಕೆಂಬ ಒತ್ತಡಗಳಿಗೆ ಸಿಲುಕಿದ್ದಾರೆ. ಇದರ ನಡುವೆಯೂ ಹೋರಾಟದ ಕಿಚ್ಚೊಂದು ಆಶಾದಾಯಕ ಬೆಳವಣಿಗೆಗೆ ಕಾರಣವಾಗಿದೆ.
ತಾಲಿಬಾನ್ ಉಗ್ರರ ಕಿರುಕುಳ, ಹಿಂಸೆಯ ಕರಾಳಮುಖವನ್ನು ನೋಡಿರುವ ಬಹುತೇಕರು ಕಾಬೂಲ್ ತೊರೆದು ಹೋಗಿದ್ದಾರೆ. ಅವರಲ್ಲಿ ಪ್ರಸಿದ್ದ ವಕೀಲರು, ಪತ್ರಕರ್ತರು, ವೈದ್ಯರು, ಇಂಜಿನಿಯರ್ ಗಳು ಮತ್ತು ಅಮೆರಿಕಾ ಪಡೆಗಳ ಪರವಾಗಿ ಕೆಲಸ ಮಾಡಿದವರು, ಮಾನವಹಕ್ಕುಗಳ ಹೋರಾಟಗಾರರು ಕೂಡ ಸೇರಿದ್ದಾರೆ. ಸಾವಿರಾರು ಆಫ್ಘನ್ ಮಹಿಳೆಯರೂ ದೇಶ ಬಿಟ್ಟು ಬೇರೆ ದೇಶಗಳಲ್ಲಿ ನೆಲೆಸಿರುವ ಉದಾಹರಣೆಗಳು ಇವೆ. ಅಮೆರಿಕ, ಇಂಗ್ಲೆಂಡ್, ಯೂರೋಪಿಯನ್ ಯೂನಿಯನ್, ಭಾರತದ ನಾಗರಿಕರು ಕಾಬೂಲ್ ತೊರೆದು ತಮ್ಮ ದೇಶಗಳಿಗೆ ವಾಪಸ್ ಆಗಿದ್ದಾರೆ.
ಇದು ಒಂದು ಕಡೆಯಾದರೆ ದಿಟ್ಟ ಮಹಿಳೆಯರು ಕಾಬೂಲ್ ಬೀದಿಗಳಲ್ಲಿ ಹಿಂಸಾಪೀಡಕರ ವಿರುದ್ಧ ಪ್ರಬಲ ಹೋರಾಟವನ್ನು ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಸ್ಥಳೀಯ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಸ್ವಲ್ಪಮಟ್ಟಿಗೆ ಮಣಿದಂತೆ ಕಾಣುತ್ತಿರುವ ತಾಲಿಬಾನ್ ಮುಖಂಡರು “ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತೇವೆ. ಆದರೆ ಉನ್ನತ ಹುದ್ದೆಗಳನ್ನು ಕೊಡುವುದಿಲ್ಲ” ಎಂಬ ಷರತ್ತು ವಿಧಿಸಿದ್ದಾರೆ. ಇದಕ್ಕೆ ಆಫ್ಘನ್ ಮಹಿಳೆಯರು ಒಪ್ಪಿದಂತೆ ಕಾಣುತ್ತಿಲ್ಲ. ಆದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕೈಯಲ್ಲಿ ಪ್ಲೇಕಾರ್ಡ್ ಗಳನ್ನು ಹಿಡಿದು ತಾಲಿಬಾನ್ ಆಡಳಿತ ರಚನೆಯ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇದು ತಾಲಿಬಾನಿಯರ ಸರ್ಕಾರ ರಚನೆಗೆ ಪ್ರತಿಭಟನೆಯ ಸ್ವಾಗತದಂತೆ ಕಾಣುತ್ತಿದೆ.
ಕಾಬೂಲ್ ಮತ್ತು ಅಂತಾರಾಷ್ಟ್ರೀಯ ಸಮುದಾಯ “ಮಹಿಳೆಯರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಎರಡು ದಶಕಗಳಿಂದಲೂ ಸಾಕಷ್ಟು ಪ್ರಗತಿಯಾಗಿದೆ. ಮಹಿಳೆಯರು ಕ್ರಿಯಾಶೀಲ ಪಾತ್ರವಿಲ್ಲದೆ ಯಾವುದೇ ಸಮಾಜದಲ್ಲಿ ಪ್ರಗತಿಯಾಗುವುದಿಲ್ಲ” ಎಂಬುದನ್ನು ಪ್ರತಿಭಟನಾನಿರತ ಮಹಿಳೆಯರು ತಾಲಿಬಾನ್ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ನಿಜವಾಗಿಯೂ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಏನೆಂಬುದನ್ನು ಎರಡು ದಶಕಗಳಲ್ಲಿ ಅಲ್ಲಿನ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆ ಹೋರಾಟನಿರತ ಮಹಿಳೆಯರಿಗೆ ಸ್ಪೂರ್ತಿ ನೀಡಿದೆ. ಯಾವುದೇ ಸರ್ಕಾರ ಮಹಿಳೆಯರನ್ನು ಕಡೆಗಣಿಸಿದರೆ ಆಗುವ ಹಿನ್ನಡೆಯನ್ನು ವಿಶ್ವಸಮುದಾಯಕ್ಕೆ ಈ ಮಹಿಳೆಯರು ಧೈರ್ಯವಾಗಿ ಹೇಳುತ್ತಿದ್ದಾರೆ.
ಪ್ರಜಾಪ್ರಭುತ್ವ ಮಾದರಿಯ ಮಹಿಳಾ ಹೋರಾಟಗಳಿಂದ ವಿಶ್ವಸಮುದಾಯ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಆ ಕಾರಣಕ್ಕಾಗಿಯೇ ಇಂಗ್ಲೆಂಡ್, ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟಗಳು ತಾಲಿಬಾನ್ ಜೊತೆಗೆ ಒಪ್ಪಂದಕ್ಕೆ ಸಿದ್ದ. ಆದರೆ ಸರ್ಕಾರ ರಚನೆಗೆ ಅಂಗೀಕಾರ ನೀಡುವುದಿಲ್ಲ” ಎನ್ನುತ್ತಿವೆ. ಆದರೆ ಇದೇ ಬಲಿಷ್ಠ ದೇಶಗಳ ನಡುವಿನ ಒಳಜಗಳ, ಶೀತಲಸಮರ ಇಂದಿನ ಆಫ್ಘನ್ ಸ್ಥಿತಿಗೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಮೆರಿಕಾ ಮಿತ್ರ ಪಡೆಗಳು ಮಾಡಿದ ತಂತ್ರಕ್ಕೆ ಆಫ್ಘನ್ ಮಹಿಳೆಯರು ಬಲಿಯಾಗಬೇಕಾಗಿದೆ. ಶಸ್ತ್ರಾಸ್ತ್ರಗಳ ಮಾರಾಟದಿಂದ ಬೃಹತ್ ಬಂಡವಾಳ ಹೊಂದಿರುವ ದೇಶಗಳು ತೃತೀಯ ಜಗತ್ತಿನ ದೇಶಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ ಮತ್ತು ಸಾರ್ವಭೌಮ ರಾಷ್ಟ್ರವೊಂದರ ಪತನಕ್ಕೆ ಕಾರಣವಾಗಿದೆ.
ಅಲ್ಲಿನ ಮಹಿಳೆಯರ ಹಕ್ಕುಗಳ ರಕ್ಷಣೆಗೆ ವಿಶ್ವಸಮುದಾಯ ಬೆಂಬಲಕ್ಕೆ ನಿಲ್ಲಬೇಕಾಗಿದೆ. ತಾಲಿಬಾನ್ ಪಡೆಗಳ ದಾಳಿಯಿಂದ ಕಂಗಾಲಾಗಿರುವ ಬಹುತೇಕ ಮಹಿಳೆಯರು ಕುಗ್ಗಿಹೋಗಿದ್ದಾರೆ. ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇಂತಹ ಸನ್ನಿವೇಶದ ನಡುವೆಯೇ ಪ್ರತಿಭಟನೆಗೆ ಇಳಿದಿರುವ ಮಹಿಳೆಯರು ತಮ್ಮ ಹಕ್ಕುಗಳ ಉಳಿವಿಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಗೃಹಬಂಧನದಿಂದ ಮುಕ್ತಿ, ವಿದ್ಯಾಭ್ಯಾಸ, ಉದ್ಯೋಗ ಮಾಡಲು ಅವಕಾಶ ನೀಡುವಂತೆ ಮಹಿಳೆಯರ ಮೇಲೆ ಯಾವುದೇ ರೀತಿಯ ನಿರ್ಬಂಧ ಹೇರದಂತೆ ತಾಲಿಬಾನ್ ಪ್ರಮುಖರ ಮೇಲೆ ಒತ್ತಡ ಹೇರುವ ಕಾರ್ಯತಂತ್ರವೂ ಪ್ರತಿಭಟನೆಯ ಹಿಂದಿರುವ ಉದ್ದೇಶ. ಇದಕ್ಕೆ ತಾಲಿಬಾನ್ ಒಪ್ಪಬೇಕು. ದೇಶದ ಅಭಿವೃದ್ಧಿ, ಪ್ರಗತಿಯಲ್ಲಿ ಮಹಿಳೆಯರ ಪಾತ್ರವೂ ಪ್ರಮುಖ ಎಂಬುದನ್ನು ತಾಲಿಬಾನ್ ಅರ್ಥಮಾಡಿಕೊಳ್ಳಬೇಕು.
ಅಮೆರಿಕಾ, ಚೀನಾ, ರಷ್ಯಾ ನಡುವಿನ ವೈರತ್ವದ ಹಠಮಾರಿತನಕ್ಕೆ ಇಡೀ ಆಫ್ಘನ್ ಸಂಕಷ್ಟು ಗುರಿಯಾಗಿದೆ. ಮಹಿಳೆಯರು, ಮಕ್ಕಳು, ನಾಗರಿಕರ ಮೇಲಿನ ದೌರ್ಜನಗಳು ಎಗ್ಗಿಲ್ಲದೆ ನಡೆಯುತ್ತಿದ್ದು ಮಾನವ ಹಕ್ಕುಗಳ ಉಲ್ಲಂಘನೆ ವಿಪರೀತವಾಗಿದೆ. ಹಾಗಾಗಿ ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ಆ ದೇಶದ ನಾಗರಿಕರ ರಕ್ಷಣೆಗೆ ಮಾನವೀಯತೆ ಪರ ದೇಶಗಳು ಮುಂದಾಗಬೇಕು. ತಾಲಿಬಾನ್ ಸರ್ಕಾರ ಉದಾರವಾದಿ ನೀತಿಗಳ ಜಾರಿಗೆ ಮುಂದಾಗುವಂತೆ ಒತ್ತಡ ಹೇರಬೇಕು. ಮಹಿಳಾ ಹೋರಾಟಕ್ಕೆ ಯಶಸ್ಸು ಸಿಗಬೇಕು. ಇಲ್ಲದಿದ್ದರೆ ಉಗ್ರತ್ವದ ರೋಗ ನೆರೆಯ ದೇಶಗಳಿಗೂ ಅಂಟಿಕೊಳ್ಳುವ ಕಾಲ ದೂರವಿಲ್ಲ.
ಕೆ.ಈ.ಸಿದ್ದಯ್ಯ