Thursday, January 29, 2026
Google search engine
Homeಮುಖಪುಟಮನರೇಗಾ ಪುನರ್ ಸ್ಥಾಪಿಸುವವರೆಗೂ ಹೋರಾಟ-ಸಿಎಂ ಸಿದ್ದರಾಮಯ್ಯ

ಮನರೇಗಾ ಪುನರ್ ಸ್ಥಾಪಿಸುವವರೆಗೂ ಹೋರಾಟ-ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ಗ್ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್‌ ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಉಳಿಸಿ ಆಂದೋಲನದ” ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರದಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆಗಳನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದವು ಎಂದರು.

ಮಹಿಳೆಯರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಸಣ್ಣ ರೈತರ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್.

ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ. 53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ ಕೇಂದ್ರ ಸರ್ಕಾರ, ಆರ್ ಎಸ್ ಎಸ್ ನವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದೆ ಎಂದು ದೂರಿದರು.

ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ ‘ವೋಟ್ ಗಾಗಿ ಮಾಡಿದ ಯೋಜನೆಗಳು’ ಎಂದು ಟೀಕಿಸುತ್ತಿದ್ದರು. ಮಹಿಳೆಯರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ನರೇಗಾಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತಿಗಳು ಈ ಮೊದಲು ಕೆಲಸವನನ್ನು ನಿರ್ಧರಿಸುತ್ತಿದ್ದವು. ಆದರೆ ಈಗ ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ ಗ್ರಾಮೀಣ ಆಡಳಿತ ಬಿಟ್ಟು, ದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ ಎಂದರು.

ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಅವಕಾಶವಿಲ್ಲ. ನರೇಗಾ ಯೋಜನೆಯಿಂದ, ಹಿಂದೆ ಕೂಲಿಗಾರರಿಗೆ 100 ದಿನಗಳ ಕೆಲಸ ಖಾತ್ರಿಯಾಗಿ ಸಿಗುತ್ತಿತ್ತು. ಬಡವರ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ಗ್ರಾಮ್ ಜಿ ಯ ಜಾರಿಯಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ನರೇಗಾ ಅಡಿಯಲ್ಲಿ ವೆಚ್ಚಮಾಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಈ ಅನುದಾನವನ್ನು ನಿಲ್ಲಿಸಲಾಗಿದ್ದು, ಕೇಂದ್ರದ ಈ ಹೊಸ ಕಾಯ್ದೆಯಂತೆ ಶೇ. 40 ರಷ್ಟು ರಾಜ್ಯ ಸರ್ಕಾರಗಳು ಕೊಟ್ಟು, ಕೇಂದ್ರ ಶೇ. 60 ರಷ್ಟು ಮಾತ್ರ ಪಾವತಿಸುತ್ತದೆ ಎಂದು ತಿಳಿಸಿದರು.

ಕೇಂದ್ರದ ಇಂತಹ ಜನವಿರೋಧಿ ನೀತಿಯಿಂದ ಹಲವು ರಾಜ್ಯಗಳು ಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ, ಕೇಂದ್ರದ ನೀತಿಯನ್ನು ಪ್ರತಿಭಟಿಸುತ್ತಿದೆ. ಈ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾವನ್ನು ಪುನರ್ ಸ್ಥಾಪಿಸುವವರೆಗೂ ಇಡೀ ದೇಶದ ಜನರು ಈ ಹೋರಾಟ ಮುಂದುವರೆಸಬೇಕಿದೆ. ಈ ಬಾರಿ ರೈತರು, ಕಾರ್ಮಿಕರು, ಮಹಿಳೆಯರು ಈ ಹೋರಾಟದಲ್ಲಿ ಕೈಜೋಡಿಸಲಿದ್ದಾರೆ.

ವಿಬಿ ಗ್ರಾಮ್ ಜಿ ಎಂದೂ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಅರ್ ಎಸ್ ಎಸ್ ಹುನ್ನಾರ ಎಂದು ವಾಗ್ದಾಳಿ ನಡೆಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಸಮಾನತೆ ಸ್ಥಾಪನೆಯಾಗಿಸಲು ಆರ್ಥಿಕ , ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ಮಹಾತ್ಮ ಗಾಂಧಿಯವರು ಗ್ರಾಮ ಸ್ವರಾಜ್ಯ ಕಲ್ಪನೆ ಪ್ರತಿಪಾದಿಸಿದರು. ಗೋಡ್ಸೆ ಮಹಾತ್ಮಗಾಂಧಿಯವರ ಹತ್ಯೆಯನ್ನು ಮಾಡಿದರೆ, ಬಿಜೆಪಿಯವರು ನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಮಹಾತ್ಮ ಗಾಂಧಿಯವರನ್ನು ಮತ್ತೊಮ್ಮೆ ಹತ್ಯೆ ಮಾಡಿದಂತಾಗಿದೆ. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆಯ ರದ್ದತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಿಜೆಪಿಯವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆದರೆ ರದ್ದತಿಯ ವಿರುದ್ಧ ಸರ್ಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular