ತುಮಕೂರು ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ವಕೀಲರಿಗೆ ಸಿಹಿ ಹಂಚಿ ವಕೀಲರ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಬುಧವಾರ ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಯಂತ್‌ಕುಮಾರ್ ಶಿಬಿರ ಉದ್ಘಾಟಿಸಿ, ನಾನೂ ವಕೀಲನಾಗಿ ವಕೀಲರ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ, ಎಲ್ಲಾ ವಕೀಲರಿಗೂ ಶುಭಾಶಯಗಳು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ದೈನಂದಿನ ಕೆಲಸದ ಒತ್ತಡ ವಕೀಲರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆರೋಗ್ಯ ಸಮಸ್ಯೆ ಬಾಧಿಸುತ್ತಿದ್ದರೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಕೀಲರು ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದು ತಪಾಸಣಾ ಶಿಬಿರ ಏರ್ಪಡಿಸಿ ವಕೀಲರ ಆರೋಗ್ಯ ಪರೀಕ್ಷೆ ಮಾಡಿಸುವುದು, ಆರೋಗ್ಯದ ಬಗ್ಗೆ ಜಾಗೃತಿ ವಹಿಸಲೆಂದು. ವಕೀಲರು ನಿಯಮಿತವಾಗಿ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ನವಿನ್ ನಾಯಕ್, ಮಾಜಿ ಕಾರ್ಯದರ್ಶಿ ತಿಪ್ಪೇಸ್ವಾಮಿ ವಕೀಲರಾದ ಶಿವಣ್ಣ.ಈ ಮತ್ತು ಇತರೆ ವಕೀಲರು ಭಾಗವಹಿಸಿದ್ದರು.


