ತುಮಕೂರಿನ ಸರ್ಕಾರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಪಿಪಿಪಿ ಮಾಡೆಲ್ ಮೂಲಕ ಖಾಸಗೀಕರಣಗೊಳಿಸುವ ಸರ್ಕಾರದ ತೀರ್ಮಾನಕ್ಕೆ ಔಷಧ ವ್ಯಾಪಾರಿಗಳೂ ಸೇರಿದಂತೆ ಸಾರ್ವಜನಿಕರ ತೀವ್ರ ವಿರೋಧವಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತುಮಕೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್.ಎಸ್.ಪಂಡಿತ್ ಜವಾಹರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತುಮಕೂರು ಜಿಲ್ಲಾ ಆಸ್ಪತ್ರೆಯ 1931ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಪ್ರಾರಂಭವಾಗಿ ಇನ್ನೇನು ನೂರು ವರ್ಷಕ್ಕೆ ಹತ್ತಿರ ಬರುತ್ತಿದೆ. ಅಂದಿನಿಂದ ಇಂದಿನವರೆಗೆ ಈ ದೀರ್ಘ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಯಾಗಿ ಉಳಿದು ರೋಗಿಗಳಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಈ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದ ಲಕ್ಷಾಂತರ ರೋಗಿಗಳು ತಮ್ಮ ಕಾಯಿಲೆಗಳನ್ನು ವಾಸಿ ಮಾಡಿಕೊಂಡು ಸರ್ಕಾರಕ್ಕೆ ಕೃತಜ್ಞರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಾಸ್ತವ ಅಂಶ ಹೀಗಿರುವಾಗ ಈಗ ಇದ್ದಕ್ಕಿದ್ದ ಹಾಗೆ ಪಿ ಪಿ ಪಿ ಮಾಡೆಲ್ ನಲ್ಲಿ ಈ ಆಸ್ಪತ್ರೆಯನ್ನು ಖಾಸಗಿಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ( ಉಲ್ಲೇಖ :DME/ PPP/01/24-2025, ದಿನಾಂಕ 12-11-2024) ಸಾರ್ವಜನಿಕರಿಗೆ ಬರೆಸಿಡಿಲು ಬಡಿದಂತೆ ಆಗಿದೆ ಎಂದು ಹೇಳಿದ್ದಾರೆ.
ಶೇಕಡ 70ರಷ್ಟು ಆರ್ಥಿಕವಾಗಿ ದುರ್ಬಲರಾಗಿರುವ ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಮತ್ತು ಈ ಸರ್ಕಾರಿ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಈಗ ಖಾಸಗಿಕರಣದ ವಿಚಾರ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಆರ್ಥಿಕವಾಗಿ ದುರ್ಬಲರ, ಬಡವರ, ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಲೆಂದು ಎಷ್ಟೇ ವಿರೋಧವಿದ್ದರೂ ವರ್ಷಕ್ಕೆ 50 ಸಾವಿರ ಕೋಟಿ ಹಣ ಮೀಸಲಿಟ್ಟು ಭಾಗ್ಯಗಳ ಗಳನ್ನು ಜಾರಿಗೆ ತಂದಿರುವ ಸಮಾಜವಾದಿ ನೀವು. ನಿಮ್ಮ ಸರ್ಕಾರಕ್ಕೆ ತುಮಕೂರು ಜನರಲ್ ಆಸ್ಪತ್ರೆ ಒಂದು ಭಾರವೆ? ಈ ಸರ್ಕಾರಕ್ಕೆ ಅಷ್ಟೊಂದು ಬಡತನವೇ? ಎಂದು ಕೇಳಿದ್ದಾರೆ.
ಜನಪ್ರಿಯ ಮುಖ್ಯಮಂತ್ರಿ, ಮತ್ತು ಮಾಸ್ ಲೀಡರ್ ಆಗಿರುವ ನೀವು, ಇವೆಲ್ಲವನ್ನೂ ಗಮನಿಸಿ, ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ನಾವು ನಿಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.


