ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಾದರೆ ದಲಿತ ಸಮುದಾಯಕ್ಕೆ ಸೇರಿದ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಮುಖಂಡರು ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಅರೆ ಬೆತ್ತಲೆ ಮೆರವಣಿಗೆ ಮಾಡಿದರು.
ನೂರಾರು ದಲಿತ ಯುವಜನರ ತುಮಕೂರಿನ ಟೌನ್‌ಹಾಲ್ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಯಿಂದ ಬಿಜಿಎಸ್ ವೃತ್ತದವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತಯುವ ಮುಖಂಡ ಟಿ.ಸಿ.ರಾಮಯ್ಯ, ಪರಮೇಶ್ವರ್ ಸತತವಾಗಿ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಮೂರು ಬಾರಿ ಗೃಹ ಸಚಿವರಾಗಿ, ಉನ್ನತ ಶಿಕ್ಷಣ, ರೇಷ್ಮೆ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ದೊಡ್ಡಗುಣ ಅವರಲ್ಲಿದೆ. ಇಡೀ ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ದಲಿತರು ಹುಟ್ಟಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಸಿಎಂ ಸ್ಥಾನ ನೀಡಿಲ್ಲ ಎಂದು ಕಿಡಿಕಾರಿದರು.
ಅಧಿಕಾರದಿಂದ ಮಾತ್ರ ವಂಚಿಸಲಾಗುತ್ತಿದೆ. ದಲಿತ ಸಿ.ಎಂಗೆ ಇದು ಸೂಕ್ತ ಕಾಲ. ಕಾಂಗ್ರೆಸ್ ಪಕ್ಷ ತನ್ನ ಮೇಲಿರುವ ಎಲ್ಲಾ ಅಪವಾದಗಳನ್ನು ತೊಳೆದುಕೊಳ್ಳಲು ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು.
ಕಾಂಗ್ರೆಸ್ ಯುವ ಮುಖಂಡ ಮೋಹನ್‌ಕುಮಾರ್ ಮಾತನಾಡಿ, ಪರಮೇಶ್ವರ್ ಪಕ್ಷದ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 2023ರ ಚುನಾವಣೆಯಲ್ಲಿ ಪ್ರಾಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಅವರು ರಚಿಸಿದ ಪ್ರಾಣಾಳಿಕೆ ಮತ್ತು ಐದು ಗ್ಯಾರಂಟಿಗಳ ಫಲವಾಗಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರ ಹಿಡಯುವಂತಾಯಿತು. ಇಷ್ಟೆಲ್ಲಾ ಸಾಧನೆಗಳಿದ್ದರೂ ಡಾ.ಜಿ.ಪರಮೇಶ್ವರ್ ಅವರನ್ನು ಅಧಿಕಾರದಿಂದ ವಂಚಿಸುವ ಕೆಲಸ ನಿರಂತರವಾಗಿ ಕಾಂಗ್ರೆಸ್ ಹೈಕಮಾಂಡ್‌ನಿಂದ ನಡೆಯುತ್ತಿದೆ. ಈಗಲೂ ಅದೇ ಪರಿಸ್ಥಿತಿ ಮುಂದುವರೆದರೆ ಎಂತಹ ಹೋರಾಟಕ್ಕೂ ದಲಿತ ಪರ ಸಂಘಟನೆಗಳು ಮುಂದಾಗಲಿವೆ ಎಂದರು.
ಪ್ರತಿಭಟನೆಯಲ್ಲಿ ಸಿ.ಭಾನುಪ್ರಕಾಶ್, ಹೆಗ್ಗೆರೆ ಕೃಷ್ಣಮೂರ್ತಿ, ರಾಮುಮೂರ್ತಿ, ಗುರುಪ್ರಸಾದ್, ನರಸಿಂಹರಾಜು, ಚಿಕ್ಕನಾಯಕನಹಳ್ಳಿ ಸಿದ್ದರಾಮಯ್ಯ, ಜಯಮೂರ್ತಿ, ಮಂಜುನಾಥ್, ಜಯಣ್ಣ, ಕೋತಮಾರನಹಳ್ಳಿ ಕುಮಾರ್, ಶಿವಲಿಂಗಯ್ಯ, ನರಸಿಂಹರಾಜು, ಶಿವರಾಜು, ರಂಗಸ್ವಾಮಿ ಪಾಲ್ಗೊಂಡಿದ್ದರು.


