Wednesday, January 21, 2026
Google search engine
Homeಮುಖಪುಟಮಳೆಗೆ ಬೆಳೆ ಹಾನಿ-ವಿಶೇಷ ಪ್ಯಾಕೇಜ್ ಘೋಷಣೆ-ಸಿದ್ದರಾಮಯ್ಯ

ಮಳೆಗೆ ಬೆಳೆ ಹಾನಿ-ವಿಶೇಷ ಪ್ಯಾಕೇಜ್ ಘೋಷಣೆ-ಸಿದ್ದರಾಮಯ್ಯ

ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ರೂ.1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಚಾಲನೆ ನೀಡಲಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಂಗಾರು ಮಳೆಯಿಂದಾಗಿ ಬೆಳೆ ಹಾನಿಗೆ ಒಳಗಾದ ರಾಜ್ಯದ ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.1033.60 ಕೋಟಿ ಹೆಚ್ಚುವರಿ ಪರಿಹಾರ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದರು.

ನಾವು ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್‌ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರಿಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ. 8500 ರಿಂದ ರೂ. 17 ಸಾವಿರ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.17 ಸಾವಿರದಿಂದ ರೂ.25,500 ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.22,500ರಿಂದ ರೂ. 31 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ 14.24 ಲಕ್ಷ ರೈತರಿಗೆ ಇನ್ಪುಟ್ ಸಬ್ಸಿಡಿಯಾಗಿ ಈಗಾಗಲೇ ರೂ. 1218.03 ಕೋಟಿ ವಿತರಿಸಲಾಗಿದೆ. ಇದರ ಜೊತೆಗೆ ರಾಜ್ಯ ನಿಧಿಯಿಂದ ರೂ. 1033.60 ಕೋಟಿಯನ್ನು ಟಾಪ್ ಅಪ್ ರೂಪದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್ ನಿಂದ ಸೆಪ್ಟಂಬರ್ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು ರೂ.10,748 ಕೋಟಿ ಬೆಳೆ ಹಾನಿ ಅಂದಾಜಿಸಲಾಗಿದೆ ಎಂದರು.

ಮುಖ್ಯವಾಗಿ ತೊಗರಿ ಬೇಳೆ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿ 2.68 ಲಕ್ಷ ಹೆಕ್ಟೇರ್ ಮತ್ತು ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್ ಹಾನಿ ಉಂಟಾಗಿದೆ. ಒಂಭತ್ತು ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದೆ. ಮುಖ್ಯವಾಗಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಿದರು.

ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ. ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ ಎಂದರು.

ಬೆಳೆ ನಷ್ಟದ ಗ್ರಾಮವಾರು ಪಟ್ಟಿಯನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಆನ್‌ಲೈನ್ ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಬಳಿಕ ನಷ್ಟ ಅನುಭವಿಸಿದ ರೈತರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಇನ್‌ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರನ್ನು ನವೆಂಬರ್ 17ರಂದು ಭೇಟಿ ಮಾಡಿ, ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಗೆ ಪ್ರತಿಕ್ರಿಯೆ ಹಾಗೂ ಪರಿಹಾರ ಅಡಿಯಲ್ಲಿ ರೂ. 614.90 ಕೋಟಿ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಸರಿಪಡಿಸಲು PDNA (Recovery & Reconstruction) ಅಡಿಯಲ್ಲಿ ರೂ. 1,521.67 ಕೋಟಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular