ನಾದ, ಲಯ, ವೇಷಭೂಷಣದ ಯಕ್ಷಲೋಕವೇ ಬಯಲಾಟ, ಅದು ರಂಜನೆಗೆ ಬೇಕಾದ ಎಲ್ಲವನ್ನೂ ಪೂರೈಸುತ್ತದೆ. ಮೂಡಲಪಾಯ ಬಯಲಾಟದ ತವರು ತುಮಕೂರು ಜಿಲ್ಲೆ ಆಗಿದ್ದು, ಈ ಜಿಲ್ಲೆಯಲ್ಲಿ ಇಪ್ಪತ್ತೆರಡು ಕಥೆಗಳ ಮೂಲಕ ಬಯಲಾಟ ಕಲಾವಿದರು ಜನರಿಗೆ ರಂಜನೆ ನೀಡುತ್ತಿದ್ದಾರೆ. ಇಂತಹ ಕಲೆಯ ಕಲಾವಿದರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಂಸ್ಕೃತಿ ಚಿಂತಕ ಡಾ. ನಟರಾಜ್ ಬೂದಾಳ್ ಹೇಳಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಏರ್ಪಡಿಸಿದ್ದ ಮೂರುದಿನದ ಮೂಡಲಪಾಯ ಬಯಲಾಟ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡನಾಡಿದರು.
ಮೂಡಲಪಾಯ ಬಯಲಾಟದಲ್ಲಿ ಕಥೆಗೆ ಹೆಚ್ಚಿನ ಆದ್ಯತೆ ಇದೆ. ಈ ಕಥೆಗಳು ವಾಸ್ತವಕ್ಕಿಂತ ದೂರವಾಗಿರುತ್ತವೆ. ಆದರೂ ಅದರಲ್ಲಿ ಗಂಭೀರವಾದ ಆಲೋಚನೆ ಇರುತ್ತದೆ. ಭಾರತವನ್ನು ಸಂವಿಧಾನದ ಮೂಲಕ ಆಳಬೇಕು ಎಂದು ಬಯಸಿದರೆ ಇಂದು ಕೆಲವೇ ಎರಡು ಕಥೆಗಳು ನಮ್ಮ ಸಮಾಜವನ್ನು ನಿಯಂತ್ರಿಸುತ್ತಿವೆ. ಇಂತಹ ಸಾಂಸ್ಕೃತಿಕ ರಾಜಕಾರಣದಲ್ಲಿ ಗ್ರಾಮೀಣ ಪ್ರದೇಶದ ಬಯಲಾಟ ಕಲಾವಿದರ ಗೋಳು ಹೇಳತೀರದು. ಬಯಲಾಟ ಇಂದು ಕರಾವಳಿಯಲ್ಲಿ ಯಕ್ಷಗಾನ ರೂಪದಲ್ಲಿ ವಿಜೃಂಭಿಸುತ್ತಿದ್ದು ಸರ್ಕಾರದ ಎಲ್ಲಾ ಪ್ರಶಸ್ತಿ ಪುರಸ್ಕಾರಗಳು ಅವರಿಗೇ ಲಭ್ಯವಾಗುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮೂಡಲಪಾಯ ಬಯಲಾಟದಲ್ಲಿ ದೇವೀಮಹಾತ್ಮೆ ಅತ್ಯಂತ ಜನಪ್ರಿಯವಾದ ಆಟ. ಇದು ಶಾಕ್ತ ಪಂಥದ ಕೃತಿ. ಪ್ರತಿ ಮಹಿಳೆ ದೇವಿಯ ಮೂರ್ತರೂಪ ಎಂಬುದನ್ನು ಈ ಕಥೆ ಸೂಚಿಸುತ್ತದೆ. ಇಂದು ಬಯಲಾಟ ಕಲಾವಿದರು ಆಧುನಿಕತೆಗೆ ತಕ್ಕಂತೆ ಮೂಲ ಸ್ವರೂಪಕ್ಕೆ ಬದಲಾಗದ ರೀತಿ ಕತೆಗಳಲ್ಲಿ ಮಾರ್ಪಾಡು ಮಾಡಿಕೊಂಡು ಹೊಸ ಆಲೋಚನೆಯನ್ನು ಮಾಡುತ್ತಾ ಪ್ರದರ್ಶಿಸಿದರೆ ಕಲೆಯನ್ನು ಉಳಿಸಬಹುದು, ಇಲ್ಲದಿದ್ದರೆ ಇಂದಿನ ಸಮಾಜ ಅದನ್ನು ನಿರ್ಲಕ್ಷಿಸುವ ಮೂಲಕ ಅವನತಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕತೆಗಾರ ತುಂಬಾಡಿ ರಾಮಯ್ಯ ಮಾತನಾಡಿ, ಬಯಲಾಟ ಸಂಸ್ಕೃತಿಯ ಅವಿಭಾಜ್ಯ ಅಂಶ. ಆ ಕಲೆಯನ್ನು ಗಂಡು ಕಲೆ ಎಂದೇ ನಂಬಲಾಗಿದೆ. ಬಯಲಾಟದ ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕಲೆಗಳನ್ನೇ ನಂಬಿ ಜೀವಿಸುತ್ತಿರುವ ಕಲಾವಿದರ ಬದುಕು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಬೇಕು. ಈ ಕಲೆಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಸಿದರೆ ಇದು ಉಳಿಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ದುರ್ಗಾದಾಸ್ ಮಾತನಾಡಿ, ಬಯಲಾಟದಲ್ಲಿ ಬರುವ ರಾಮಾಯಣದ ಘಟನೆಗಳು ಸ್ಥಳೀಯತೆಯನ್ನು ಅವಲಂಭಿಸಿ ಪ್ರದರ್ಶಿಸುತ್ತವೆ. ರಾಮ ಎಂದರೆ ನಮಗೆ ಬಿಲ್ಲು ಬಾಣ ಮತ್ತು ಅವನ ಪರಿವಾರದ ಚಿತ್ರ ನೆನಪಿಗೆ ಬರುತ್ತದೆ. ಆದರೆ ರಾಮನನ್ನು ಇಂದು ಒಂಟಿಯಾಗಿ ಪ್ರತಿಷ್ಠಾಪಿಸಲಾಗಿರುವುದು. ಶಬರಿಯ ಹಸ್ತದಿಂದ ಹಣ್ಣುಗಳನ್ನು ತೆಗೆದುಕೊಳ್ಳುವ ರಾಮನ ಮೂರ್ತಿಯನ್ನಾಗಲೀ ಅಥವಾ ಚಿತ್ರವನ್ನಾಗಲೀ ಏಕೆ ಬಿಡಿಸುವುದಿಲ್ಲ. ಇಂದು ರಾಮ ಸಾಂಸ್ಕೃತಿಕ ರಾಜಕಾರಣದಲ್ಲಿ ಸಿಕ್ಕಿದ್ದಾನೆ ಎಂದು ತಿಳಿಸಿದರು.
ತುಮಕೂರು ವಿ.ವಿ. ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ. ಅಣ್ಣಮ್ಮ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹಾಜರಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಸ್ವಾಗತಿಸಿದರು. ಜಿ.ಹೆಚ್.ಮಹದೇವಪ್ಪ ವಂದಿಸಿದರು. ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ ನಿರೂಪಿಸಿದರು.


