ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯು ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಗರಿಗೆದರಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಿ ಚರ್ಚಿಸಲಾಯಿತು.
ದಲಿತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಎಂ ವೆಂಕಟಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರವಿರೋಧಗಳ ಹೇಳಿಕೆಗಳು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಎಂ.ಎಲ್.ಸಿ. ಡಾ.ಯತೀಂದ್ರ ಬೆಳಗಾವಿಯಲ್ಲಿ ಆಡಿರುವ ಮಾತು ಗಂಭೀರವಾದ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಕ್ಕೆ ಪ್ರತಿಯಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಂ.ಬಿ.ಪಾಟಿಲ್ ತಾನು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿ ರಾಜಕೀಯ ಸನ್ಯಾಸಿಯಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯ ದಲಿತ ಜನಾಂಗಗಳಲ್ಲಿ ರಾಜಕೀಯ ಚಿಂತನೆಗಳ ದೊಡ್ಡ ಅಲೆಗಳನ್ನೇ ಎಬ್ಬಿಸುತ್ತೇವೆ ಎಂದರು.
ದಲಿತ ಸಂರಕ್ಷಾ ಸಮಿತಿ ರಾಜ್ಯಾಧ್ಯಕ್ಷ ಲಯನ್ ಬಾಲಕೃಷ್ಣ ಮಾತನಾಡಿ ‘ದಲಿತ ಉಪ ಮುಖ್ಯಮಂತ್ರಿ’ ಮಾಡುವ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಲ್ಲಿ ಮೂಡಿಬಂದು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಆಡಳಿತಗಳಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಾದರು. ಸಮರ್ಥ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರನ್ನು ಮುಂದಿನ ಎರಡೂವರೆ ವರ್ಷಗಳಿಗೆ ಮುಂದುವರೆಸುವುದಾದರೆ ದಲಿತ ಸಂಘಟನೆಗಳ ಯಾವುದೇ ತಕಾರಾರು ಇರುವುದಿಲ್ಲ. ಇದೀಗ ದಲಿತ ಸಂಘಟನೆಗಳು ಮತ್ತು ದಲಿತ ಜನಾಂಗವು ರಾಜಕೀಯವಾಗಿ ಜಾಗೃತಿಗೊಂಡು ಬೀದಿಗಿಳಿದು ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಇಂದಿಗೂ ಸಹ ದಲಿತರ ಋಣದಲ್ಲಿರುವುದನ್ನು ಮರೆಯಬಾರದು. ಕಾಂಗ್ರೆಸ್ ಇಂದಿನ ಮುತ್ಸದ್ದಿಗಳಾದ ಮಲಿಕಾರ್ಜುನ ಖರ್ಗೆ, ಕೆ.ಹೆಚ್ ಮುನಿಯಪ್ಪ ಡಾ.ಜಿ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳ ರೂಪದಲ್ಲಿ ಸಮರ್ಥ ಆಡಳಿತಗಾರರಾಗಿದ್ದಾರೆ ಮತ್ತು ಪಕ್ಷದ ಕಟ್ಟಾಳುಗಳಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಮುಂದಿನ ನವೆಂಬರ್ 21ರ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಇವರುಗಳಲ್ಲಿ ಯಾರಾದರೊಬ್ಬರನ್ನು ಮುಂದಿನ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಬೇಕಾಗಿ ಹೈಕಮ್ಯಾಂಡ್‌ನ್ನು ಆಗ್ರಹಿಸುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ದಲಿತ ಪ್ರಜಾ ವಿಮೋಚನ ಸೇನೆ ಅಧ್ಯಕ್ಷ ಮುನಿ ಆಂಜಿನಪ್ಪ, ದಲಿತ ಸ್ವಾಭಿಮಾನ ಸೇನೆ ಬಂಡೆ ಕುಮಾರ್, ಸಮತ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಹೇರೂರು ಧನರಾಜ್, ಮುಖಂಡರಾದ ಸುರೇಶ್ ರಾಜ್, ಜಗದೀಶ್, ಎಂ.ರಾಮಯ್ಯ, ಸುರೇಶ್ ಟಿ.ಸಿ ಸಂತೆಪೇಟೆ, ವೆಂಕಟೇಶ್ ಫಾರುಕ್ ಪಾಷಾ, ಹೆಗ್ಗೆರೆ ಕೃಷ್ಣಪ್ಪ, ಹಟ್ಟಿರಂಗಯ್ಯ ಇದ್ದರು.


