ಸ್ವಸ್ಥ ಶಕ್ತಿ, ಸಮೃದ್ದ ಸಮಾಜ ಎಂಬ ಘೋಷ ವಾಕ್ಯದೊಂದಿಗೆ 2025ರ ಅಕ್ಟೋಬರ್ 31, ನವೆಂಬರ್ 1 ಮತ್ತು 2 ರಂದು ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘ ಹಾಗೂ ಸಿದ್ದಾರ್ಥ ಮಡಿಕಲ್ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸಹಕಾರದಲ್ಲಿ 35ನೇ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ರಾಜ್ಯಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನದ ಆಯೋಜನಾ ಸಮಿತಿ ಉಪಾಧ್ಯಕ್ಷ ಡಾ.ಬಸವರಾಜು ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ತ್ರೀರೋಗ ಮತ್ತು ವಸೂತಿ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಅವಿಷ್ಕಾರಗಳು, ಚಿಕಿತ್ಸಾ ಪದ್ದತಿಗಳ ಬಗ್ಗೆ ವೃತ್ತಿ ನಿರತರಲ್ಲಿ ಕೌಶಲ್ಯ ವೃದ್ದಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಡಾ.ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ 1500 ರಿಂದ 2000 ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು, ಇನ್ನೂ ಉತ್ತಮವಾಗಿ ಚಿಕಿತ್ಸೆ ನೀಡಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿದೆ ಎಂದರು.
ಸಮ್ಮೇಳನದಲ್ಲಿ ಸ್ತ್ರೀಯರ ಆರೋಗ್ಯದ ಬಗ್ಗೆ ವೈಜ್ಞಾನಿಕ ಗೋಷ್ಠಿ, ಕ್ವಿಜ್, ಪೋಸ್ಟರ್ ಬಿಡುಗಡೆ, ಪ್ರಬಂಧ ಮಂಡನೆ, ಪ್ಯಾನಲ್ ಡಿಸ್ಕಷನ್, ಲೈವ್ ವರ್ಕ್ ಶಾಫ್, ಚರ್ಚೆ, ಸಂವಾದ, ವಿಚಾರಗೋಷ್ಠಿಗಳ ಬಗ್ಗೆ ಹಿರಿಯ, ಕಿರಿಯ ವೈದ್ಯರಿಗೆ ಕ್ಷೇತ್ರದ ಬೆಳವಣಿಗೆ ಮತ್ತು ಅವುಗಳನ್ನು ತಮ್ಮ ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಕುರಿತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಹಿರಿಯರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ.ದುರ್ಗಾದಾಸ್ ಅಸ್ರಣ್ಣ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ರಾಜ್ಯ ಸಮ್ಮೇಳನ ನಡೆಸಬೇಕೆಂಬ ಬಹುದಿನದ ಕನಸು ಈಡೇರುತ್ತಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸಲಿದ್ದಾರೆ. ಜೆಮ್ ಆಸ್ಪತ್ರೆ ಸಂಸ್ಥಾಪಕ ಡಾ.ಪಳಿನಿವೇಲು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಭಾಸ್ಕರ್‌ಪಾಲ್, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನವು ಅಧ್ಯಕ್ಷರಾಗಿ ಕರ್ನಾಟಕ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರ ಸಂಘದ ರಾಜ್ಯಾಧ್ಯಕ್ಷ ಡಾ.ದುರ್ಗಾದಾಸ್ ಅಸ್ರಣ್ಣ, ಉಪಾಧ್ಯಕ್ಷ ಡಾ.ಬಸವರಾಜು, ಡಾ.ಜೋತಿ ಸಿದ್ದಲಿಂಗೇಶ್ವರ್, ಡಾ.ಇಂದಿರಾ ಶಿವಾನಂದ್, ಡಾ.ಜೋತಿ ಮಹೇಶ್, ಡಾ.ದ್ವಾರಕನಾಥ್, ಡಾ.ಲಲಿತ ಹೆಚ್.ಎಸ್, ಡಾ.ಗಿರಿಜಾ ಸಂಜಯ್, ಕಾರ್ಯದರ್ಶಿಯಾಗಿ ಡಾ.ರಚನಾ ಜೆ.ಟಿ. ಕಾರ್ಯನಿರ್ವಹಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ದುರ್ಗಾದಾಸ್ ಅಸ್ರಣ್ಣ, ಡಾ.ರಚನಾ, ಡಾ.ಜಯಮ್ಮ, ಡಾ.ಇಂದ್ರಾ, ಡಾ.ಹನುಮಕ್ಕ, ಡಾ.ಗಿರಿಜಾ, ಡಾ.ಅನುಸೂಯ, ಡಾ.ದ್ವಾರಕನಾಥ್, ಡಾ.ಜೋತಿ, ಡಾ.ಶುಭಾ ದ್ವಾರಕನಾಥ್ ಇದ್ದರು.


