ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜನವರಿ 15 ರಿಂದ 7 ದಿನಗಳ ಕಾಲ ರಾಜ್ಯಮಟ್ಟದ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಜನವರಿ 15 ರಿಂದ ನಡೆಯಲಿರುವ ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಟೆನ್ನಿಸ್, ಕಬಡ್ಡಿ, ಸ್ವಿಮ್ಮಿಂಗ್ ಸೇರಿದಂತೆ ಸುಮಾರು 27 ಕ್ರೀಡಾಕೂಟಗಳು ನಡೆಯಲಿವೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧೆಡೆಗಳಿಂದ 4600 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ತುಮಕೂರು ಕ್ರೀಡೆಗೆ ಬಹಳ ಹೆಸರುವಾಸಿ ಆಗಿರುವ ಜಿಲ್ಲೆ. ನಮ್ಮ ಜಿಲ್ಲೆಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತೇವೆ. ಇದಕ್ಕೆ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದರು.

ನಮ್ಮ ಜಿಲ್ಲೆಗೆ ಯಾವುದೇ ಜವಾಬ್ದಾರಿ ನೀಡಿದರೂ ಜಿಲ್ಲಾಡಳಿತ ಒಂದು ತಂಡವಾಗಿ ಕೆಲಸ ಮಾಡಿ ಶ್ರೇಯಸ್ಸು ತಂದು ಕೊಡುತ್ತಿದೆ. ಮುಂದೆಯೂ ಇದೇ ರೀತಿ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಬಹುಮುಖ್ಯ. ಹಾಗಾಗಿ ಅಂತಿಮ ಪಂದ್ಯಾವಳಿಯಲ್ಲಿ ಚಿಕ್ಕೋಡಿ ಹಾಗೂ ವಿಜಯಪುರ ತಂಡಗಳು ಸೋತಿದ್ದರೂ ಸಹ ಗೆದ್ದಂತೆಯೇ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿದ್ದ 62 ತಂಡಗಳು ಈ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ 62 ಪಂದ್ಯಗಳನ್ನು ಆಡಿ, ಉತ್ತಮ ಪ್ರದರ್ಶನ ನೀಡಿವೆ. ಈ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲ ತಂಡಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಹಾಗೂ ಧರ್ಮಸ್ಥಳ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಯಗಳಿಸಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಪ.ಪೂ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಈ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಜಯಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಜಯಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತಂಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಹುಮಾನ ವಿತರಿಸಿದರು. ರಾಜ್ಯದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಗಣತಿ ನಡೆದಿದ್ದು, ಈ ಗಣತಿಯಲ್ಲೂ ಸಹ ತುಮಕೂರು ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಡಿಸಿ ಶುಭಕಲ್ಯಾಣ್, ಜಿ.ಪಂ. ಸಿಇಒ ಜಿ. ಪ್ರಭು, ಎಸ್‌ಪಿ ಕೆ.ವಿ. ಅಶೋಕ್, ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ನ ರವಿ, ಕೃಷ್ಣೇಗೌಡ, ಪ್ರಭಾಕರ್, ಬಸವರಾಜು, ಮಹಲಿಂಗೇಶ್, ಇಸ್ಮಾಯಿಲ್, ಪ್ರದೀಪ್ ಇದ್ದರು.


