ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಿ ಯಶಸ್ವಿ ಕಂಡಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ತುಮಕೂರು ಸಾಂಸ್ಕೃತಿಕ ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನಾದ್ಯಂತ ತುಮಕೂರು ದಸರಾ ಜನಮನ ಗೆದ್ದಿದೆ. ಆಧುನಿಕ ಭಾರತದಲ್ಲಿ ಕರ್ನಾಟಕ ರಾಜ್ಯವು ವೇಗವಾಗಿ ಅಭಿವೃದ್ಧಿಯ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ತುಮಕೂರು ವಿಶೇಷ ಸ್ಥಾನಮಾನ ಹೊಂದಿದ್ದು, ಸಿದ್ಧಗಂಗಾ ಶ್ರೀಗಳು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಅನ್ನದಾನ ನೀಡುತ್ತಿರುವುದು ಮಾದರಿ ಸಂಗತಿಯಾಗಿದೆ. ಇನ್ನೊಂದು ಕಡೆ ದಿವಂಗತ ಗಂಗಾಧರಯ್ಯ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ಹರಡಿದ್ದರು ಎಂದು ಸ್ಮರಿಸಿದರು.
ದಸರಾ ಹಬ್ಬವು ಉಳಿದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದು ಇತಿಹಾಸ ಹೇಳುತ್ತದೆ. ಕರ್ನಾಟಕದ ಇತಿಹಾಸ ವೈವಿಧ್ಯಮಯವಾಗಿದ್ದು, ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿ ಕಾಲದಲ್ಲಿ ಮಸ್ಕಿಯಲ್ಲಿ ಬೌದ್ಧ ಸಿದ್ಧಾಂತ ಹರಡಿದ ಉದಾಹರಣೆ, ಬೇಲೂರು ಹಳೇಬೀಡಿನಲ್ಲಿ ಜೈನ ಪರಂಪರೆಯ ಸಾಕ್ಷಿಗಳು ಕಾಣಸಿಗುತ್ತವೆ. ಹೀಗಾಗಿ ಕರ್ನಾಟಕ ಇತಿಹಾಸವನ್ನು ಅವಲೋಕಿಸಿದಾಗ ಭಾರತ ದೇಶದ ಯಾವುದೇ ರಾಜ್ಯದಲ್ಲಿ ಸಿಗದಷ್ಟು ಐತಿಹಾಸಿಕ ಪರಂಪರೆ ಇಲ್ಲಿ ಅಡಕವಾಗಿದೆ ಎಂದು ಹೇಳಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 20,000 ಎಕರೆ ಪ್ರದೇಶದಲ್ಲಿ ಏಷ್ಯಾ ಖಂಡದ ಅತಿ ದೊಡ್ಡ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ತುಮಕೂರು ಜಿಲ್ಲೆಯಿಂದ 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಪ್ರತಿ ವರ್ಷ 10ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಲಾಗುತ್ತಿರುವುದು ಜಿಲ್ಲೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಹಿತಿ ನೀಡಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಜಿ. ಪ್ರಭು, ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್.ವಿ ವೆಂಕಟೇಶ್, ಎಸ್ ಪಿ ಅಶೋಕ್ ಕೆ.ವಿ, ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಇದ್ದರು.
ಮಲ್ಲ ಚಲನಚಿತ್ರದ “ಕರುನಾಡೇ ಕೈ ಚಾಚಿದೆ ನೋಡೆ” ಹಾಡಿನ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದ ಕ್ರೇಜಿ ಸ್ಟಾರ್ ರವಿಚಂದ್ರನ್, ಜಸ್ಟ್ ಮಾತ್ ಮಾತಲ್ಲಿ ಚಲನಚಿತ್ರದ “ಎಲ್ಲೋ ರವಿ ಬರುವ ಸಮಯ” ಹಾಡಿನ ಮೂಲಕ ವೇದಿಕೆಗೆ ಆಗಮಿಸಿದ ಮೋಹಕ ತಾರೆ ರಮ್ಯಾ ಅವರನ್ನು ಹುಚ್ಚೆದ್ದು ಕುಣಿಯುವ ಮೂಲಕ ಪ್ರೇಕ್ಷಕರು ಸ್ವಾಗತಿಸಿದರು.

ಖ್ಯಾತ ಕನ್ನಡ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ ನಟ ಕ್ರೇಜಿû ಸ್ಟಾರ್ ರವಿಚಂದ್ರನ್ ಮಾತನಾಡಿ, “ಕನ್ನಡವನ್ನು ಅಪ್ಪಿಕೊಂಡಿರುವ ನನಗೆ ತುಮಕೂರಿನ ಪ್ರೀತಿಯು ನನ್ನ ಹೆತ್ತ ತಂದೆ-ತಾಯಿಯನ್ನು ನೆನಪಿಸುತ್ತದೆ” ಎಂದು ಭಾವುಕರಾದರು. ತುಮಕೂರಿನ 2 ಚಿತ್ರ ಮಂದಿರಗಳಲ್ಲಿ ತಮ್ಮ ಚಿತ್ರಗಳು ಬಿಡುಗಡೆಯಾಗುತ್ತಿದ್ದುದನ್ನು ಸ್ಮರಿಸಿಕೊಂಡು, “ಆ ದಿನಗಳಲ್ಲಿ ತುಮಕೂರು ಜನರು ನೀಡಿದ ಪ್ರೀತಿ, ಗೌರವ ನನಗೆ ಸದಾ ಸ್ಫೂರ್ತಿ ನೀಡಿದೆ” ಎಂದು ಹೇಳಿದರಲ್ಲದೆ, ಮತ್ತೊಂದು ಹೊಸದಾಗಿ ‘ಪ್ರೇಮಲೋಕ’ ಚಿತ್ರ ತಯಾರಿಗೆ ಸಿದ್ಧತೆ ನಡೆಯುತ್ತಿದೆ. ಪ್ರೇಮ ಮತ್ತು ಕುಟುಂಬ ಮೌಲ್ಯಗಳನ್ನು ಒಳಗೊಂಡ ಈ ಹೊಸ ಚಿತ್ರವೂ ಜನಮನ ಗೆಲ್ಲಲಿದೆ ಎಂಬ ವಿಶ್ವಾಸ ನನಗಿದೆ ಎಂದರು.


