ಉಸಿರಾಟದ ತೊಂದರೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥತೆ ಕಾಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನುರಿತ ವೈದ್ಯರ ತಂಡ, ಖರ್ಗೆ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದೆ.
ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಗೆ ತೆರಳಿ ಖರ್ಗೆ ಅವರ ಆರೋಗ್ಯ ವಿಚಾರಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್, ಮಾಜಿ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರರು ಜೊತೆಯಲ್ಲಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಉತ್ತಮವಾಗಿದೆ. ಎಲ್ಲರ ಜೊತೆ ಆರಾಮವಾಗಿ ಮಾತನಾಡಿಕೊಂಡಿದ್ದಾರೆ. ನಿಯಮಿತ ತಪಾಸಣೆಗೆ ಬಂದಿದ್ದ ಅವರು ಚಿಕಿತ್ಸೆಗೆ ದಾಖಲಾಗಿದ್ದರು. ಗುರುವಾರ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ ಎಂದು ಹೇಳಿದರು.
ಈ ನಡುವೆ ಅವರ ಪುತ್ರ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ತಂದೆಯವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಹಲವಾರು ಕಾರಣಗಳಿಂದ ಅವರಿಗೆ ಫೇಸ್ ಮೇಕರ್ ಅಳವಡಿಸಬೇಕಾಗಿದೆ. ಗುರುವಾರ ಆಸ್ಪತ್ರೆಯಲ್ಲಿ ವೈದ್ಯರು ಫೇಸ್ ಮೇಕರ್ ಅಳವಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಖರ್ಗೆ ಅವರು ನಿರಂತರ ಪ್ರವಾಸ ಮತ್ತು ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಬಳಲಿದ್ದರು ಇದೀಗ ಅವರು ಚೇತರಿಸಿಕೊಂಡಿದ್ದು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಅವರ ಅನಾರೋಗ್ಯದ ಬಗ್ಗೆ ಕಾಳಜಿ ತೋರಿ ವಿಚಾರಿಸಿದ ಎಲ್ಲ ನಾಯಕರಿಗೂ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.


