ಹಿಂದೂ ಎಂಬುದು ಒಂದು ಜೀವನ ವಿಧಾನವೇ ಹೊರತು, ಅದು ಧರ್ಮವಲ್ಲ. ಲಿಂಗಾಯಿತ ಎಂಬುದು ಜಗಜ್ಯೋತಿ ಬಸವೇಶ್ವರರಿಂದ ಸ್ಥಾಪಿಸಲ್ಪಟ್ಟ ಧರ್ಮವಾಗಿದ್ದು, ವಚನ ಸಾಹಿತ್ಯವೇ ಧರ್ಮಗ್ರಂಥವಾಗಿದೆ ಎಂದು ಮಂಡರಗಿಯ ನಿಷ್ಕಲ ಮಠದ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.
ತುಮಕೂರು ನಗರದ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಲಿಂಗಾಯಿತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಬೆಳಗಾವಿಯ ಡಾ.ಮಹಂತ ಪ್ರಭು ಸ್ವಾಮಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ನಗರದ ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಬಸವಣ್ಣ ಲಿಂಗಾಯಿತರಿಗೆ ಸಿಮೀತವಲ್ಲ. ಸಕಲರಿಗೆ ಒಳಿತನ್ನೇ ಬಯಸುವುದೇ ನಿಜವಾದ ಧರ್ಮ, ಅದೇ ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ. ಹಾಗಾಗಿ ಲಿಂಗಾಯಿತ ಪ್ರತ್ಯೇಕ ಧರ್ಮ ಎಂದು ಸ್ಪಷ್ಟಪಡಿಸಿದರು.
ಮಠಕ್ಕೆ ಭಕ್ತರು ನೀಡುವ ಕಾಣಿಕೆ ಪಡೆಯುವ ಸಂದರ್ಭದಲ್ಲಿ ಇದು ಒಳ್ಳೆಯ ದಾರಿಯಲ್ಲಿ ಸಂಪಾದನೆ ಮಾಡಿದ್ದೆ ಇಲ್ಲವೇ ಎಂದು ಸ್ವಾಮಿಗಳು ಪ್ರಶ್ನೆ ಮಾಡಿದ್ದೀರ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ ನಿಜಗುಣನಂದ ಶ್ರೀಗಳು, ಮಠಕ್ಕೆ ಕಾಣಿಕೆ ನೀಡುವ ಪ್ರತಿಯೊಬ್ಬರನ್ನು ಪ್ರಶ್ನಿಸಿ ಖಚಿತಪಡಿಸಿಕೊಳ್ಳುವುದು ಕಷ್ಟ ಸಾಧ್ಯ. ದಾನವು ಸತ್ಯ, ಶುದ್ದ ಕಾಯಕದಿಂದ ಕೂಡಿದ್ದರೆ ಅದು ಲಿಂಗಕ್ಕೆ ಅರ್ಪಿತ ಎಂದು ಬಸವಣ್ಣನವರೇ ಹೇಳಿದ್ದಾರೆ. ಆದರೆ ತಾಯಂದಿರು ಮನಸ್ಸು ಮಾಡಿ, ತಮ್ಮ ಗಂಡಂದಿರು ದುಡಿದು ತರುವ ಆದಾಯವನ್ನು ಇದು ಒಳ್ಳೆಯ ಮಾರ್ಗದಲ್ಲಿ ದುಡಿದಿದ್ದೋ, ಇಲ್ಲವೋ ಎಂದು ಪ್ರಶ್ನಿಸಿದರೆ ದೇಶದಲ್ಲಿ ನಡೆಯುವ ಅರ್ಧದಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ತಾಯಂದಿರು ಮುನ್ನುಡಿ ಬರೆಯಬೇಕು ಎಂದು ಸಲಹೆ ನೀಡಿದರು.
ಲಿಂಗಾಯಿತ ಮಠಾಧೀಶರಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ. ಹಾಗಾಗಿ ಸುಮಾರು 200ಕ್ಕೂ ಹೆಚ್ಚು ಲಿಂಗಾಯಿತ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನದ ಹೆಸರಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರಿಗೆ ಸತ್ಯವನ್ನು ತಿಳಿಸುವ ಸಲುವಾಗಿ ಇಂತಹ ಅಭಿಯಾನ ನಡೆಸುತ್ತಿದ್ದೇವೆ. ಈ ಅಭಿಯಾನದ ಒಟ್ಟು ಉದ್ದೇಶ. ಲಿಂಗಾಯಿತ ಧರ್ಮಕ್ಕೆ ಬಸವಣ್ಣನೇ ಗುರು, ವಚನವೇ ಗ್ರಂಥ. ಕಶಾಯ ವಸ್ತ್ರ ತ್ಯಾಗದ ಸಂಕೇತ. ಇದನ್ನು ಇಂತಹವರೇ ಧರಿಸಬೇಕೆಂದಿನಿಲ್ಲ. ಜನರಲ್ಲಿ ವೈಜ್ಞಾನಿಕ, ವೈಚಾರಿಕ ಭಾವನೆಯನ್ನು ಮೂಡಿಸುವ ಸಲುವಾಗಿ, ಕಾಯಕ, ದಾಸೋಹದ ಮಹತ್ವವನ್ನು ಪ್ರಚುರಪಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಬಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಬಸವ ಸಂಸ್ಕೃತಿ ಅಭಿಯಾನದ ತುಮಕೂರು ಜಿಲ್ಲಾಧ್ಯಕ್ಷ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಗದಗದ ಡಾ. ತೊಂಟದ ಸಿದ್ದರಾಮ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ. ಅಭಿನವ ಮಲ್ಲಿಕಾರ್ಜುನಸ್ವಾಮೀಜಿ, ಬೆಳ್ಳಾವೆಯ ಕಾರದ ವೀರಬಸವ ಸ್ವಾಮೀಜಿ, ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪಕುಮಾರ್, ರೂಪ್ಸಾ ಅಧ್ಯಕ್ಷ ಡಾ.ಹಾಲೇನೂರು ಲೇಪಾಕ್ಷ, ಕೆಂಪಣ್ಣಗೌಡರ್, ಡಾ.ಡಿ.ಎನ್.ಯೋಗೀಶ್ವರಪ್ಪ, ಸಾಗರನಹಳ್ಳಿ ಪ್ರಭು ಭಾಗವಹಿಸಿದ್ದರು.
ಬಸವ ಸಂಸ್ಕೃತಿ ಅಭಿಯಾನ ನಗರದ ಟೌನ್ ಹಾಲ್ ವೃತ್ತದಿಂದ ಮಹಾತ್ಮ ಗಾಂಧಿ ರಸ್ತೆಯ ಮೂಲಕ ಸಾಗುವಾಗ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಿಜಗುಣಾನಂದ ಸ್ವಾಮೀಜಿ ಮುಂದೆ ಸಾಗಿದರು.


