ಇತಿಹಾಸ ಎಂಬುದು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಮ್ಮ ಪೂರ್ವಜರ ಶಕ್ತಿ ಶೌರ್ಯದ ದಾಖಲಿಕರಣವೇ ಪರಂಪರೆ. ಇವೆಲ್ಲವೂ ಇತಿಹಾಸವಾಗಿದೆ. ಇತಿಹಾಸದ ಮಹತ್ವವನ್ನು ತಿಳಿದು ಪರಂಪರೆಯನ್ನು ಉಳಿಸೋಣ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಎಂ.ಕೊಟ್ರೇಶ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ವತಿಯಿಂದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಉಳಿಸುವ ಕುರಿತು ರಾಜ್ಯಾದ್ಯಂತ ಸಪ್ತಾಹ ನಡೆಯುತ್ತಿದ್ದು ತುಮಕೂರು ಜಿಲ್ಲೆಯಲ್ಲಿಯೂ ಯುವಕರಿಗೆ ಪರಂಪರೆ ಉಳಿಸುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಇಂದಿಗೆ ಇತಿಹಾಸವನ್ನು ಉಳಿಸಿ ಪರಂಪರೆಯ ಕೊಡುಗೆ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಕಿವಿ ಇಲ್ಲದ ಕೋಟೆ ಬಾಯಿ ಇಲ್ಲದ ಮೂರ್ತಿಗಳು ನಮ್ಮನ್ನು ಮಾತನಾಡಿಸುತ್ತಿವೆ. ಒಂದು ವೀರಗಲ್ಲಿನಿಂದ ಪರಾಕ್ರಮಿ ಗಂಡುಗಲಿ ಕುಮಾರರಾಮನ ವೀರತ್ವ ಹಾಗೂ ಶೌರ್ಯದ ಬಗ್ಗೆ ತಿಳಿಯುವುದಕ್ಕೆ ಸಾಧ್ಯವಾಯಿತು. ಅವರ ಸಾಮರ್ಥ್ಯ ಮತ್ತು ಶೌರ್ಯ ನಮ್ಮ ಪೀಳಿಗೆಗೆ ಮಾದರಿಯಾಗಿದೆ. ಅದರ ಅಧ್ಯಯನದಿಂದ ಶ್ರೀಮಂತ ಪರಂಪರೆಯನ್ನು ತಿಳಿದಂತಾಗುತ್ತದೆ. ಪರಂಪರೆ ಎಂದರೆ ಕೋಟೆಕೊತ್ತಲ, ದೇವಸ್ಥಾನ, ಕೆರೆ ಕಟ್ಟೆಗಳು ಮಾತ್ರವಲ್ಲದೆ ನಮ್ಮ ಕುಟುಂಬದ ಹಿನ್ನೆಲೆಯು ಆಗಿರುತ್ತದೆ. ಹಾಗಾಗಿ ಅವುಗಳನ್ನು ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಪರಂಪರೆಯ ಕೊಡುಗೆ ನೀಡಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕಿ ವಿಮಲಾಕ್ಷಿ ಸ್ಮಾರಕಗಳು ದೇವಾಲಯಗಳು, ಕೋಟೆಗಳು, ವಿಶ್ವದ ಪರಂಪರೆಗಳಾಗಿ ಮಾರ್ಪಟ್ಟಿವೆ. ನಮ್ಮಲ್ಲಿರುವ ಹಲ್ಮಿಡಿ ಶಾಸನ ಕನ್ನಡದ ಮೊದಲ ಶಾಸನವಾಗಿ ಹೊರಹೊಮ್ಮಿದ್ದು ಆ ಮೂಲಕ ಕನ್ನಡದ ಇತಿಹಾಸವನ್ನು ನಾವು ಇಂದು ಅಧ್ಯಯನ ಮಾಡುತ್ತಿದ್ದೇವೆ. ಅದೇ ರೀತಿ ತುಮಕೂರು ಜಿಲ್ಲೆಯ ಹುಲಿಯೂರುದುರ್ಗ, ಚನ್ನರಾಯದುರ್ಗ, ಮಧುಗಿರಿ ಬೆಟ್ಟ, ಅಮಾನಿಕೆರೆ, ಮೈದಾಳ ಕೈದಾಳ ಹಾಗೆ ಸಾಕಷ್ಟು ಸ್ಥಳಗಳ ಪುರಾತತ್ವ ಉಳಿಸಿಕೊಂಡು ಬಂದರೆ ತುಮಕೂರು ಕೂಡ ಒಂದು ಉತ್ತಮ ಪಾರಂಪರಿಕ ತಾಣವಾಗುವ ಲಕ್ಷಣಗಳಿವೆ ಎಂದರು.
ಪ್ರಾಂಶುಪಾಲ ಡಾ.ಜಿ. ದಾಕ್ಷಾಯಣಿ ಮಾತನಾಡಿ, ನಮ್ಮ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗುವುದೇ ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡುವ ಉತ್ತಮ ಕೊಡುಗೆಯಾಗಿದೆ ಎಂದರು.
ಐತಿಹಾಸಿಕ ಪರಂಪರೆ ಉಳಿಸಿ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿಎನ್ ಹರಿಪ್ರಸಾದ್ ಇದ್ದರು.


