ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ 1ರಲ್ಲಿ ಬೇರೆ ಸಮುದಾಯದವರು ಎಸ್ಟಿ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಹಾಗೂ ಬೇರೆ ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾದ ಸರ್ಕಾರದ ನಿಲುವು ಸರಿಯಲ್ಲ ಎಂದು ವಿರೋಧಿಸಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗುಬ್ಬಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬುಡಕಟ್ಟಿನ ಪರ್ಯಾಯ ಹೆಸರುಗಳಾದ ಪರಿವಾರ, ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಯ ಹಿಂದುಳಿದ ವರ್ಗಗಳ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗಳನ್ನು ನಾಯಕ ತಳವಾರ ಹೆಸರಿನಲ್ಲಿ 2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದು ಸರ್ಕಾರದ ಸವಲತ್ತು ಪಡೆದಿದ್ದಾರೆ. ಈ ವಾಮಮಾರ್ಗದ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಹಗಲು ದರೋಡೆಗೆ ಕಡಿವಾಣ ಹಾಕಲಿಲ್ಲ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ಎಚ್.ಆರ್.ರಾಮಚಂದ್ರಪ್ಪ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ನ್ಯಾಯಾಲಯ ಮೆಟ್ಟಿಲೇರಿ ಕ್ರಮ ಕೈಗೊಂಡ ಬಗ್ಗೆ ಆದೇಶ ನೀಡಿದ್ದರೂ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ವಾಲ್ಮೀಕಿ ಸಮಾಜ ಖಂಡಿಸುತ್ತದೆ. ಬಲಾಢ್ಯ ಸಮುದಾಯಗಳು ನಮ್ಮ ಮೀಸಲಾತಿಗೆ ಬಂದರೆ ವಾಲ್ಮೀಕಿ ಸಮಾಜ ಎಲ್ಲಾ ಸವಲತ್ತುಗಳಿಂದ ವಂಚಿತವಾಗುತ್ತದೆ. ರಾಜ್ಯದಲ್ಲಿ ನಮ್ಮ ಸಮಾಜದ ಮೇಲೆ ದೌರ್ಜನ್ಯ ನಿರಂತರ ನಡೆದಿದೆ. ಈ ಬಗ್ಗೆ ಸರ್ಕಾರ ಗಂಭೀರ ಕಾನೂನು ಕ್ರಮ ಕೈಗೊಳ್ಳಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಎಸ್ಟಿ ಜನಾಂಗದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜ, ಪಟ್ಟಣ ಪಂಚಾಯಿತಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿದರು. ಮುಖಂಡ ಮಂಚಲದೊರೆ ರಮೇಶ್, ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಎನ್. ಅಡವೀಶಯ್ಯ, ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ, ಸದಸ್ಯರಾದ ನಿಟ್ಟೂರು ಕೃಷ್ಣಮೂರ್ತಿ, ಜಿ.ಎಲ್.ರಂಗನಾಥ್, ಚೇತನ್ ನಾಯಕ್, ಹೇರೂರು ನಾಗರಾಜು, ಹೊಸಹಳ್ಳಿ ರಂಗನಾಥ್, ಸಿದ್ದರಾಜು, ಸೋಮಲಾಪುರ ಕೃಷ್ಣಮೂರ್ತಿ, ರಾಘವೇಂದ್ರ, ಜಿ.ಆರ್.ರವೀಶ್, ದೇವರಾಜ್, ಕರಿಯಪ್ಪ ಇದ್ದರು.


