ತುಮಕೂರು ತಾಲೂಕಿನ ಹೋಬಳಿ ಕೇಂದ್ರವಾದ ಹೆಬ್ಬೂರು ವೇಗವಾಗಿ ಬೆಳೆಯುತ್ತಿದ್ದು, ತಾಲ್ಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದುತ್ತಿದೆ. ಹೆಬ್ಬೂರನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅದಕ್ಕೂ ಮೊದಲು ಹೆಬ್ಬೂರಿನಲ್ಲಿ ಕುಡಿಯುವ ನೀರು, ಯೋಗ್ಯ ರಸ್ತೆ, ಸಮರ್ಪಕ ಕಸ ವಿಲೇವಾರಿ, ಶಾಲಾ-ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನಲ್ಲಿ ಲೋಕೋಪಯೋಗಿ ಇಲಾಖೆಯಡಿ 1.85 ಕೋಟಿ ರೂ ವೆಚ್ಚದ ಹೆಬ್ಬೂರು-ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು, ಅತಿ ವೇಗವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರವಾದ ಹೆಬ್ಬೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಸಂಕಲ್ಪದಿಂದ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ತಾಲ್ಲೂಕು ಕೇಂದ್ರವಾದ ನಂತರ ಹೆಬ್ಬೂರಿನಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು.
ಕಳೆದ 25 ವರ್ಷಗಳಿಂದ ಹೆಬ್ಬೂರು ಕೆರೆ ತುಂಬಿ ಕೋಡಿ ಹೋಗಿಲ್ಲ. ಕೆರೆಗೆ ಹೇಮಾವತಿ ನೀರು ತುಂಬಿಸಲು ಏತನೀರಾವರಿ ಘಟಕದ ಪಂಪು, ಮೋಟಾರ್ ಕೆಟ್ಟು ಹೋಗಿವೆ. ಇವುಗಳ ರಿಪೇರಿಗೆ ಸುಮಾರು 9 ಕೋಟಿ ರೂ. ಬಿಡುಗಡೆ ಮಾಡುವಂತೆ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಎಕ್ಸ್ಪ್ರೆಸ್ ಕೆನಾಲ್ ವಿರುದ್ಧ ಹೋರಾಟ ಮಾಡುತ್ತಿರುವ ನನ್ನ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ದ್ವೇಷವಿದೆ. ಇದರ ಮಧ್ಯೆಯೂ ಪಂಪ್, ಮೋಟಾರ್ ದುರಸ್ತಿಗೆ ಹಣ ನೀಡುವುದಾಗಿ ಸಚಿವರು ಹೇಳಿದ್ದಾರೆ. ರಿಪೇರಿಯಾದ ನಂತರ ಹೆಬ್ಬೂರು ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು. ಉತ್ತಮ ಮಳೆಯಾಗಿ ಹೆಬ್ಬೂರು ಕೆರೆ ತುಂಬಲಿ ಎಂದು ಹೇಳಿದರು.
ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಕೆಲಸಗಳಿಗೆ ಆದ್ಯತೆ ನೀಡಬೇಕು. ಗ್ರಾಮದ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರು ಮನೆಮನೆಯಲ್ಲೂ ಅರಿವು ಮೂಡಿಸಬೇಕು. ಹೆಬ್ಬೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವಂತೆ ಪಿಡಿಓಗೆ ಹೇಳಿದ್ದೇನೆ. ಮನೆಯವರು ಮೂಲದಲ್ಲಿಯೇ ಹಸಿ, ಒಣ ಕಸ ಬೇರ್ಪಡಿಸಿ ಕಸ ಕೊಡಬೇಕು. ಗ್ರಾಮ ಪಂಚಾಯ್ತಿಯು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರಿನ ಬಾಷ್ ಕಂಪನಿಗೆ ಸಿಎಸ್‌ಆರ್ ಫಂಡ್ ನೀಡುವಂತೆ ಕೋರಿದ್ದೇನೆ, ಅವರು ಒಪ್ಪಿದ್ದಾರೆ. ಅವರು ನೀಡುವ ಅನುದಾನದಲ್ಲಿ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಮತ್ತಿತರ ಸೌಲಭ್ಯ ಒದಗಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯ ಪ್ರದೀಪ್, ಉಪಾಧ್ಯಕ್ಷ ಬಾಬಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ್‌ಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಹೆಚ್.ಎ.ಆಂಜನಪ್ಪ, ಮುಖಂಡರಾದ ವೈ.ಟಿ.ನಾಗರಾಜು, ತಾರಾದೇವಿ, ಮಾಸ್ತಿಗೌಡ, ಸಿದ್ಧೇಗೌಡ, ಆರ್.ಸಿ.ಶಿವಕುಮಾರ್, ಬಳ್ಳಗೆರೆ ವೆಂಕಟೇಶ್, ತಮ್ಮಯ್ಯಣ್ಣ, ದೊಡ್ಡಸಾರಂಗಿ ಶಂಕರಣ್ಣ, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಭಾಗವಹಿಸಿದ್ದರು.


