ತುಮಕೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ಇಬ್ಬರನ್ನು ಕೊಲೆ ಮಾಡಿರುವುದನ್ನು ಖಂಡಿಸಿ ತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ನೀರು ಕೇಳಿದಕ್ಕೆ ಮತ್ತು ರಸ್ತೆಯಲ್ಲಿ ಮಕ್ಕಳು ಆಟವಾಡುವಾಗ ಗಾಡಿಯನ್ನು ನಿದಾನಕ್ಕೆ ಓಡಿಸು ಎಂದಿದ್ದಕ್ಕೆ ಕಗ್ಗೊಲೆ ಮಾಡಿರುವುದು ಅಮಾನವೀಯ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಲು ಗೃಹಸಚಿವರು, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಇದುವರೆಗೂ ಭೇಟಿ ನೀಡದೇ ಮಾನವೀಯತೆಯಿಂದ ನಡೆದುಕೊಳ್ಳದಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಪರ ಚಿಂತಕ ಕೆ.ದೊರೈರಾಜ್, ಮಧುಗಿರಿ ತಾಲ್ಲೂಕಿನ ಪೋಲೇನಹಳ್ಳಿ ಗ್ರಾಮದ ಆನಂದ ಎಂಬ ಯುವಕ ನೀರು ಕೇಳಿದಕ್ಕಾಗಿ ಕೊಲೆ ಮಾಡಿರುವುದು ಮತ್ತು ಪಾವಗಡ ತಾಲ್ಲೂಕು ಬೆಳ್ಳಿಬಟ್ಟಲು ಗ್ರಾಮದಲ್ಲಿ ಮಾದಿಗ ಸಮುದಾಯದ ಹನುಮಂತರಾಯಪ್ಪ ಅವರನ್ನು ಕೊಲೆ ಮಾಡಲಾಗಿದೆ. ಇದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.
ಹಕ್ಕೊತ್ತಾಯಗಳಲ್ಲಿ ಪಿಯುಸಿಎಲ್ ಮತ್ತು ಎಎಲ್‌ಎಫ್ ಹಾಗೂ ದಲಿತ ಮಾನವ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಎರಡು ಗ್ರಾಮಕ್ಕೆ ಭೇಟಿ ನೀಡಿ ಸತ್ಯಶೋಧನೆ ನಡೆಸಿ ಜಿಲ್ಲಾಡಳಿತಕ್ಕೆ ಪ್ರಮುಖ ಶಿಫಾರಸ್ಸುಗಳೆಂದರೆ ಸಾಕ್ಷಿದಾರರ ಸಂರಕ್ಷಣಾ ಕಾಯಿದೆ 2018ರ ಸೆಕ್ಷನ್ 7ರ ಪ್ರಕಾರ ಕುಟಂಬಕ್ಕೆ ಮತ್ತು ಸಾಕ್ಷಿದಾರರಿಗೆ ರಕ್ಷಣೆ ಒದಗಿಸಬೇಕು. ಈ ಘಟನೆಗೆ ಕಾರಣರಾದ ಎಲ್ಲರ ಮೇಲೂ ಎಫ್‌ಐಆರ್ ದಾಖಲಿಸಬೇಕು, ಮೃತರ ಕುಟುಂಬದ ಪರವಾಗಿ ವಾದಿಸಲು ವಿಶೇಷ ಸರ್ಕಾರ ಅಭಿಯೋಜಕರನ್ನು ನೇಮಿಸಬೇಕು. ಸರ್ಕಾರದಿಂದ ತಕ್ಷಣ ಎರಡು ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು. ಕನಿಷ್ಠ 2 ಎಕರೆ ಭೂಮಿ ನೀಡಬೇಕು. ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿ ಕೊಲೆಗೀಡಾದ ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣ ಹೊಣೆಗಾರಿಕೆಯನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಲಂ ಜನಾಂದೋಲನದ ಎ,ನರಸಿಂಹಮೂರ್ತಿ, ಡಿಹೆಚ್‌ಎಸ್‌ನ ನಾಗರಾಜು, ಶಿರಾ ದಲಿತ ಮುಖಂಡರಾದ ಟೈರ್ ರಂಗನಾಥ್, ಮಧುಗಿರಿಯ ಸಿದ್ದಲಿಂಗ ಸ್ವಾಮಿ, ಪಾವಗಡದ ಅಜೀತ್ ಮಾದಿಗ, ಎಐಟಿಸಿಯ ಕಂಬೇಗೌಡ, ಗಿರೀಶ್, ಎಪಿಸಿಆರ್‌ನ ತಾಜುದ್ದೀನ್ ಷರೀಫ್, ವಕೀಲರಾದ ರಂಗಧಾಮಯ್ಯ, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ, ಸುಬ್ರಮಣ್ಯ, ಮುಜೀಬ್, ತುಮಕೂರು ವಿಶ್ವವಿದ್ಯಾಲಯದ ನವೀನ್, ನಾಗರಾಜು, ಅರುಣ್, ಚಿರಂಜೀವಿ, ಗೋವಿಂದ ಪೂರ್ಣಿಮಾ, ಗುಲ್ನಾಜ್, ಫೀರ್‌ಸಾಬ್, ಶಂಕರ್, ಕೃಷ್ಣ, ರಾಜ ಇದ್ದರು.


