Thursday, January 29, 2026
Google search engine
Homeಮುಖಪುಟಕರುವಿನ ಹೃದಯಕ್ಕೆ ಹೊಟ್ಟೆಯೊಳಗಿನಿಂದ ಚುಚ್ಚಿದ್ದ ಸೂಜಿಯನ್ನು ಹೊರತೆಗೆದ ವೈದ್ಯ ಮಂಜುನಾಥ್

ಕರುವಿನ ಹೃದಯಕ್ಕೆ ಹೊಟ್ಟೆಯೊಳಗಿನಿಂದ ಚುಚ್ಚಿದ್ದ ಸೂಜಿಯನ್ನು ಹೊರತೆಗೆದ ವೈದ್ಯ ಮಂಜುನಾಥ್

ಹಸುವಿನ ಕರುವೊಂದು ವಾರದಿಂದ ಮೇವನ್ನು ತಿನ್ನದೇ ಗದ್ದದ ಕೆಳಗೆ ಊತ ಬಂದು ಸಾವು ಬದುಕಿನ ನಡುವೆ ನರಳುತ್ತಿದ್ದ ಅದನ್ನು ಪರಿಶೀಲಿಸಿದ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕರುವಿನ ಉದರದಲ್ಲಿದ್ದ ಸೂಜಿಯನ್ನು ಹೊರೆತೆಗೆದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಡಿಹಳ್ಳಿ ಗ್ರಾಮದ ಕಿಟ್ಟಪ್ಪ ಅವರ ಹಸುವಿನಕರು ಕಳೆದ ಒಂದು ವಾರದಿಂದ ಮೇವನ್ನು ತಿನ್ನುತ್ತಿರಲಿಲ್ಲ. ಜೊತೆಗೆ ಕರುವಿನ ಗದ್ದದ ಕೆಳಗೆ ಊತವೂ ಬಂದಿತ್ತು. ಹೀಗಾಗಿ ಕರುವು ನೋವಿನಿಂದ ಬಳಲುತ್ತಿತ್ತು. ಈ ವಿಷಯವನ್ನು ಪಶುವೈದ್ಯ ಡಾ.ಮಂಜುನಾಥ್ ಅವರಿಗೆ ತಿಳಿಸಿದರು.

ಈ ವಿಷಯವನ್ನು ತಿಳಿದ ಪಶುವೈದ್ಯ ಡಾ. ಎಸ್.ಪಿ. ಮಂಜುನಾಥ್ ಕರುವನ್ನು ಪರಿಶೀಲಿಸಿದರು. ಹೃದಯದ ಸುತ್ತ ಕೀವು ತುಂಬಿರುವ ಸ್ಥಿತಿಯಲ್ಲಿರುವ ಪೆರಿಕಾರ್ಡೈಟಿಸ್ ಎಂಬುದನ್ನು ಪತ್ತೆ ಹಚ್ಚಿದರು. ಮೊದಲು ಹೃದಯದ ಸುತ್ತ ತುಂಬಿದ್ದ ಕೀವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದರು.

ನಂತರ ಕರುವು ನಿಂತಿರುವ ಸ್ಥಿತಿಯಲ್ಲೇ ಕರುವಿನ ಎಡಭಾಗದ ಉದರ ತೆರೆಯುವ ಶಸ್ತ್ರಚಿಕಿತ್ಸೆಯನ್ನು ನಡೆಸಿ ಹಸುವಿನ ಎರಡನೇ ಹೊಟ್ಟೆಯಾದ ರೆಟಿಕ್ಯುಲಮ್ ನಿಂದ ಹೃದಯಕ್ಕೆ ಚುಚ್ಚುತ್ತಿದ್ದ ಸೂಜಿಯನ್ನು ಹೊರತೆಗೆದರು. ಹೀಗಾಗಿ ಕರುವು ಚೇತರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಮಂಜುನಾಥ್, ಹಸುವಿನ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿದ್ದು ಚೂಪಾದ ಪರಿಕರಗಳನ್ನು ಸೇವಿಸಿದರೆ ಅವು ಎರಡನೇ ಹೊಟ್ಟೆಯಾದ ರೆಟಿಕ್ಯುಲಮ್ ನಲ್ಲಿ ಸಿಕ್ಕಿಕೊಳ್ಳುತ್ತವೆ. ರೆಟಿಕ್ಯುಲಮ್ ಹೃದಯದ ಪಕ್ಕವೇ ಇರುವುದರಿಂದ ಹೊಟ್ಟೆಯಿಂದ ಚುಚ್ಚಿಕೊಂಡು ಹೊರಬರುವ ಚೂಪಾದ ಪರಿಕರವು ಹೃದಯಕ್ಕೆ ಚುಚ್ಚಲಾರಂಬಿಸುತ್ತದೆ. ಇದರಿಂದ ಹೃದಯ‌ ಮತ್ತು ಅದರ  ಹೊರಪದರದ ನಡುವೆ ಕೀವು ತುಂಬಲಾರಂಬಿಸುತ್ತದೆ. ಆಗ ಹೃದಯಕ್ಕೆ ಕೆಲಸ ನಿರ್ವಹಿಸಲು ಸಾದ್ಯವಾಗದೇ ಜಾನುವಾರು ಅಸುನೀಗುತ್ತದೆ ಎಂದರು.

ಆದ್ದರಿಂದ ರೈತರು ತಾವು ಕೊಡುವ ಮೇವಿನ ಮೇಲೆ ನಿಗಾ ಇಡಬೇಕು. ಈ ಕರುವಿನ ಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿತ್ತು. ಸರಿಯಾದ ಸಮಯಕ್ಕೆ ಕರುವನ್ನು ಕರೆದುತಂದಿದ್ದರಿಂದ ಜೀವ ಉಳಿಸಲು ಸಾಧ್ಯವಾಯಿತು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular