ತುಮಕೂರು ತಾಲೂಕು ಮೈದಾಳದ ಶಿವಶಕ್ತಿ ಸೇವಾಶ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ 74 ನೇ ಹುಟ್ಟು ಹಬ್ಬವನ್ನು ಆಶ್ರಮದ ಮಕ್ಕಳಿಗೆ ಸಿಹಿ ವಿತರಿಸಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಡಾ.ಜಿ.ಪರಮೇಶ್ವರ್ ಈ ನಾಡು ಕಂಡು ಅತ್ಯಂತ ಸಜ್ಜನ ರಾಜಕಾರಣಿ, ರಾಜಕಾರಣವಷ್ಟೇ ಅಲ್ಲದೆ, ತಮ್ಮ ಸಿದ್ದಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೂಲಕ ಬಡವರಿಗೆ, ನಿರ್ಗತಿಕರಿಗೆ, ದೀನ ದಲಿತರಿಗೆ ಆರೋಗ್ಯ ಸೇವೆ ನೀಡುತ್ತಾ ಬರುತ್ತಿದ್ದಾರೆ ಎಂದರು.
ಸರಕಾರದ ಅನುದಾನವಿಲ್ಲದೆ, ದಾನಿಗಳು ನೀಡಿದ ಸಹಾಯದಲ್ಲಿಯೇ ಸುಮಾರು 30 ವರ್ಷಗಳಿಂದ ನೂರಾರು ಮಕ್ಕಳಿಗೆ ಶಿವಶೈಕ್ಷಣಿಕ ಸೇವಾಶ್ರಮದ ಅಧ್ಯಕ್ಷ ಪಾಲಾಕ್ಷಯ್ಯ ಶಿಕ್ಷಣದ ಜೊತೆಗೆ, ಅನ್ನ ಮತ್ತು ಆಶ್ರಯ ನೀಡುತ್ತಾ ಬರುತ್ತಿದ್ದಾರೆ. ಹೈಸ್ಕೂಲ್ ಮತ್ತು ಅನಾಥಾಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಕೊಡಿಸುವ ನಿಟ್ಟಿನಲ್ಲಿ ಡಾ.ಜಿ.ಪರಮೇಶ್ವರ್ ಅವರ ಮೂಲಕ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಮಕ್ಕಳು ಲಭ್ಯವಿರುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಒಳ್ಳೆಯ ವಿದ್ಯಾವಂತರಾಗಿ, ನಾಡಿನ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತೆ ಎಂದು ಸಲಹೆ ನೀಡಿದರು.
ಶಿವಶೈಕ್ಷಣಿಕ ಸೇವಾಶ್ರಮದ ಅಧ್ಯಕ್ಷ ಪಾಲಾಕ್ಷಯ್ಯ ಮಾತನಾಡಿ, ದಿನಗೂಲಿಯಲ್ಲಿ ಪಾರೆಸ್ಟ್ ವಾಚ್ ಗಾರ್ಡ್ ಆಗಿದ್ದ ನನ್ನ ಸೇವೆಯನ್ನು ಖಾಯಂ ಮಾಡಿದ್ದು ಡಾ.ಜಿ.ಪರಮೇಶ್ವರ್, ನನ್ನ ಮೇಲೆ ಅವರ ಮತ್ತು ಅವರ ತಂದೆ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ಅವರ ಋಣವಿದೆ. ನೊಂದವರ, ನಿರ್ಗತಿಕರ, ಅಶಕ್ತರ ಹಾಗೂ ಅನಾಥ ಮಕ್ಕಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ 30 ವರ್ಷಗಳ ಹಿಂದೆ ಶಿವಶೈಕ್ಷಣಿಕ ಸೇವಾಶ್ರಮವನ್ನು ಆರಂಭಿಸಿದ್ದು 120ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ, ಆಶ್ರಯ, ಅನ್ನ ನೀಡುತ್ತಾ ಬಂದಿದ್ದೇವೆ ಎಂದರು.
ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳು ನಡೆಯುತ್ತಿದ್ದು, ಸರಕಾರದ ಅನುದಾನವಿಲ್ಲದ ಕಾರಣ ಶಿಕ್ಷಕರಿಗೆ ಸಂಬಳ ನೀಡಲು ಕಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಮಾತನಾಡಿ ಅನುದಾನಕ್ಕೆ ವ್ಯವಸ್ಥೆ ಮಾಡಿದರೆ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡಿ, ಅವರ ಬದುಕಿನಲ್ಲಿ ಶಿಕ್ಷಣದ ಬೆಳಕು ನೀಡಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದರು.
ಮುಖಂಡರಾದ ಲಕ್ಷ್ಮಣ, ದೀಪು, ತರಕಾರಿ ಕೃಷ್ಣಪ್ಪ, ತಿಪ್ಪೇಸ್ವಾಮಿ, ಸುಜಾತ ಶಿವಶಕ್ತಿ ಶೈಕ್ಷಣಿಕ ಆಶ್ರಮದ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.


