Thursday, January 29, 2026
Google search engine
Homeಮುಖಪುಟತುಮಕೂರು ಜಿಲ್ಲೆಗೆ ಪೂರ್ಣ ಪ್ರಮಾಣದ ನೀರು ಹರಿಸಿ-ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹ

ತುಮಕೂರು ಜಿಲ್ಲೆಗೆ ಪೂರ್ಣ ಪ್ರಮಾಣದ ನೀರು ಹರಿಸಿ-ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹ

ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಹರಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಟಿಬಿಸಿ ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಸಂಪೂರ್ಣವಾಗಿ ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸದಿದ್ದರೆ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೇಮಾವತಿ ಜಲಾಶಯದಿಂದ ತುಮಕೂರು ಶಾಖಾ ನಾಲೆಗೆ ಕಳೆದ 15 ದಿನಗಳಿಂದ ನೀರು ಹರಿಯುತ್ತಿದೆ. ನಾಲೆಯ 125 ಕಿ.ಮೀ.ನಿಂದ ಬುಗುಡನಹಳ್ಳಿ ರೆಗ್ಯುಲೆಟರ್ ಹತ್ತಿರ ನಾವು ಭೇಟಿ ನೀಡಿದಾಗ ಅಲ್ಲಿನ ಗೇಟ್‌ನಲ್ಲಿ 1.7 ಮೀಟರ್ ಎತ್ತರ ಹೇಮಾವತಿ ನೀರು ಹರಿಯುತ್ತಿದೆ. ಇದು 350 ಕ್ಯೂಸೆಕ್ ಇರಬಹುದು. ಆದರೆ ನೀರು ಹರಿಯುವ ವಿನ್ಯಾಸಿತ ಸಾಮರ್ಥ್ಯ ಇರುವುದು 1050 ಕ್ಯೂಸೆಕ್ ಆಗಿದೆ. ಆದರೆ ಪೂರ್ಣ ಪ್ರಮಾಣದ ನೀರು ಹರಿಸದೆ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುತ್ತಿದ್ದಾರೆ ಎಂದು ದೂರಿದರು.

ಹೇಮಾವತಿ ಜಲಾಶಯ ತುಂಬಿರುವ ಇಂಥ ಸಂದರ್ಭದಲ್ಲಿ ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಇದ್ದರೂ ಸಹ ಸರಿಯಾಗಿ ನೀರು ಹರಿಸದೇ ಇರುವುದ ಸರಿಯಾದ ಕ್ರಮವಲ್ಲ. ಇದರಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳ ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇನ್ನು ಮುಂದಾದರೂ ಜನಪ್ರತಿನಿಧಿಗಳು ನೀರಾವರಿ ಇಲಾಖೆಯ ಅಧಿಕಾರಿಗಳ ಕಿವಿ ಹಿಂಡಿ ಜಿಲ್ಲೆಗೆ ಹರಿಸಬೇಕಾಗಿರುವ ಹೇಮಾವತಿ ನೀರು ಸಮರ್ಪಕವಾಗಿ ಹರಿಸುವ ನಿಟ್ಟಿನಲ್ಲಿ ಚುರುಕುಗೊಳಿಸುವ ಕೆಲಸ ಮಾಡಬೇಕಿದೆ ಎಂದರು.

ಹೇಮಾವತಿ ನಾಲೆಯಲ್ಲಿ ಪೂರ್ಣ ಪ್ರಮಾಣದ ನೀರು ಹರಿಸದೆ ನಾಲೆಯಲ್ಲಿ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ ಎಂದು ಹೇಳಿಕೆ ನೀಡುವ ನೀರಾವರಿ ಇಲಾಖೆ ಅಧಿಕಾರಿಗಳ ಹೊಣೆಗೇಡಿತನದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೆ ಬರಬೇಕಾಗಿರುವ ನೀರನ್ನು ಸಮರ್ಪಕವಾಗಿ ಹರಿಸದೇ ಇದ್ದರೆ ತುಮಕೂರು ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರುಗಳು ನಮ್ಮ ಜಿಲ್ಲೆಯ ಪಾಲಿನ ನೀರನ್ನು ಹರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ತೋರಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಕೃಷಿ ಜಮೀನುಗಳಿಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಸಹ ಸಂಕಷ್ಟಕ್ಕೆ ಒಳಗಾಗಬೇಕಾಗಿದೆ ಎಂದರು. ಗೋಷ್ಠಿಯಲ್ಲಿ ಪ್ರಭಾಕರ್, ಕೆ.ಪಿ. ಮಹೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular