ಕೂಡಲೇ ಆಯೋಗದ ವರದಿ ಪಡೆದು ಬರುವ ಆಗಸ್ಟ್ 15ರೊಳಗೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಆಗಸ್ಟ್ 15ರಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮುದಾಯದ ಮುಖಂಡ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಪರಿಶಿಷ್ಟ ಜಾತಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಕೂಡಲೇ ನಾಗಮೋಹನ್‌ದಾಸ್ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 1ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತದೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂದು ಮಾದಿಗ ಸಮುದಾಯದ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಒಳಮೀಸಲಾತಿ ಜಾರಿಯ ಒಂದೊಂದು ದಿನದ ವಿಳಂಬವೂ ಪರಿಶಿಷ್ಟ ಜಾತಿಯವರು ಆಯುಷು ಕಳೆದುಕೊಳ್ಳುವಂತಾಗಿದೆ. ನಿರುದ್ಯೋಗಿಗಳ ವಯೋಮಿತಿ ಮೀರಿ ಉದ್ಯೋಗಾವಕಾಶ ಕಳೆದುಕೊಳ್ಳುವ ಆತಂಕ ಎದುರಾಗಿದೆ. ನೇಮಕಾತಿಗಳಿಗಾಗಿ ಸುಮಾರು ಎರಡು ಲಕ್ಷ ಜನ ಒಳಮೀಸಲಾತಿಗಾಗಿ ಕಾಯುವಂತಾಗಿದೆ. ಈ ಸಮಸ್ಯೆಗೆ ಒಳಮೀಸಲಾತಿ ಒಂದೇ ಪರಿಹಾರವಾಗಿದೆ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದ ಕಾಂಗ್ರೆಸ್, ಸರ್ಕಾರ ಬಂದು ಎರಡು ವರ್ಷವಾದರೂ ನುಡಿದಂತೆ ನಡೆಯಲಿಲ್ಲ. ಸವೋಚ್ಛ ನ್ಯಾಯಾಲಯದ ಆದೇಶದ ನಂತರ ನಾಗಮೋಹನದಾಸ್ ಆಯೋಗ ರಚನೆ ಮಾಡಿ, ಎರಡು ತಿಂಗಳಲ್ಲಿ ಆಯೋಗ ವರದಿ ನೀಡಲು ಸೂಚಿಸಿತ್ತು. ಇದಾಗಿ ಆರು ತಿಂಗಳಾದರೂ ಸರ್ಕಾರ ಆಯೋಗದ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡುವ ಕಾಳಜಿ ತೋರಿಲ್ಲ ಎಂದು ಆಪಾದಿಸಿದರು.
ಮುಖಂಡರಾದ ಪಾವಗಡ ಶ್ರೀರಾಮ್, ಪಿ.ಎನ್.ರಾಮಯ್ಯ, ಹೆಚ್.ಎ.ಆಂಜನಪ್ಪ, ಹೊಸಕೋಟೆ ನಟರಾಜು, ಆಂಜನಮೂರ್ತಿ, ದಾಡಿ ವೆಂಕಟೇಶ್, ರಮೇಶ್, ಬಿ.ಜಿ.ಸಾಗರ್, ಲಕ್ಕೇನಹಳ್ಳಿ ದಾಸಪ್ಪ, ಸೋರೆಕುಂಟೆಯೋಗೀಶ್, ರಘು ದಾಸಲುಕುಂಟೆ ಇದ್ದರು.


