Thursday, January 29, 2026
Google search engine
Homeಜಿಲ್ಲೆ‘ಲಿಂಕ್ ಕೆನಾಲ್ ರದ್ದು ಮಾಡುವವರೆಗೂ ಹೋರಾಟ ನಿಲ್ಲದು’

‘ಲಿಂಕ್ ಕೆನಾಲ್ ರದ್ದು ಮಾಡುವವರೆಗೂ ಹೋರಾಟ ನಿಲ್ಲದು’

ಹಾಲಿ ಇರುವ ಹೇಮಾವತಿ ನಾಲೆ ಮೂಲಕ ಕುಣಿಗಲ್ ತಾಲ್ಲೂಕಿಗೆ ಹಂಚಿಕೆ ಪ್ರಮಾಣದ ನೀರು ಹರಿಸಲು ಅವಕಾಶವಿದ್ದರೂ ರಾಜಕೀಯ ದುರುದ್ದೇಶದಿಂದ ರೂಪಿಸಿರುವ ಲಿಂಕ್ ಕೆನಾಲ್ ಅವಶ್ಯಕತೆಯಿಲ್ಲ, ಕೆನಾಲ್‌ನಿಂದ ಜಿಲ್ಲೆಯ ಆರೇಳು ತಾಲ್ಲೂಕುಗಳಿಗೆ ಹೇಮಾವತಿ ನೀರಿನ ಅನ್ಯಾಯವಾಗುತ್ತದೆ. ಇಂತಹ ಅನಾವಶ್ಯಕ ಹಾಗೂ ಮಾರಕವಾದ ಲಿಂಕ್ ಕೆನಾಲ್ ಯೋಜನೆಯನ್ನು ಈ ಕೂಡಲೇ ರದ್ದು ಮಾಡಬೇಕು, ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಮುಖಂಡರು ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಯ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಹೇಳಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆ ಖಂಡಿಸಿ, ಸಚಿವರು ಜಿಲ್ಲೆಯ ಜನರ ಹಿತ ಕಾಪಾಡಿ ಋಣ ತೀರಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕುಣಿಗಲ್ ತಾಲ್ಲೂಕಿಗೆ ನಾಗಮಂಗಲ ನಾಲೆಯಿಂದ 2.3 ಟಿಎಂಸಿ ಹಾಗೂ ತುಮಕೂರು ನಾಲೆಯಿಂದ 2.5 ಟಿಎಂಸಿ ಸೇರಿ ಸುಮಾರಿ 5 ಟಿಎಂಸಿ ನೀರು ಹರಿಸಲಾಗಿದೆ. ನಾಲೆಯ ಅಡಚಣೆ ನಿವಾರಿಸಿ, ಆಧುನಿಕರಣಗೊಳಿಸಿದರೆ ಹೆಚ್ಚಿನ ಪ್ರಮಾಣದ ನೀರನ್ನು ಕುಣಿಗಲ್‌ಗೆ ಹರಿಸಬಹುದು. ಹೀಗಿದ್ದರೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನವೊಲಿಸಿ ಲಿಂಕ್ ಕೆನಾಲ್ ಯೋಜನೆ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ. ಕೆನಾಲ್ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ. ಲಾಠಿಚಾಜ್, ಗೋಲಿಬಾರ್‌ಗೂ ಜಗ್ಗುವುದಿಲ್ಲ ಎಂದರು.

ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ನಾಲೆ ಮೂಲಕ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶವಿದ್ದರೂ ಎಕ್ಸ್ಪ್ರೆಸ್ ಕೆನಾಲ್ ನಿರ್ಮಿಸಿ ಕಳ್ಳ ಮಾರ್ಗದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ. ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕೆಂದು ನಡೆದ ಹೋರಾಟದ ನಂತರ ಸರ್ಕಾರ ಒಂದು ತಿಂಗಳ ಕಾಲಾವಕಾಶ ಕೇಳಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಮುಖ್ಯಮಂತ್ರಿ ನೇತೃತ್ವದಲ್ಲಿ ಈ ಭಾಗದ ಚುನಾಯಿತ ಪ್ರತಿನಿಧಿಗಳು ರೈತ ಮುಖಂಡರು, ಹೋರಾಟಗಾರರ ಸಭೆ ಕರೆಯಬೇಕಾಗಿತ್ತು. ಆದರೆ ಡಿಸಿಎಂ ಅಧ್ಯಕ್ಷತೆಯಲ್ಲಿ ಕರೆದ ಸಭೆಗೆ ಕೇಂದ್ರ ಸಚಿವ ಸೋಮಣ್ಣನವರ ಮನವಿ ಮೇರೆಗೆ ಹೋದೆವು. ಡಿಸಿಎಂ ನೇತೃತ್ವದ ಸಭೆಯಲ್ಲಿ ಕಟುಕನಿಗೆ ಕುರಿ ಪ್ರಾಣ ಭಿಕ್ಷೆ ಕೇಳಿದಂತಾಗಿತ್ತು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯ ಜನರಿಗೆ ಮಾರಕವಾಗಿರುವ ಲಿಂಕ್ ಕೆನಾಲ್ ವಿಚಾರದಲ್ಲಿ ಕೆಲವು ಶಾಸಕರು ಪಲಾಯನವಾದ ಅನುಸರಿಸಿದ್ದಾರೆ. ಈಗಲಾದರೂ ಮೌನ ಮುರಿದು ಜನರ ಪರವಾಗಿ ನಿಲ್ಲಬೇಕು. ಸಚಿವ ಡಾ.ಜಿ.ಪರಮೇಶ್ವರ್ ಅವರು ಲಿಂಕ್ ಕೆನಾಲ್ ಯೋಜನೆಯನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿರುವುದು ಖಂಡನೀಯ. ಅದರ ಪರಿಣಾಮಗಳನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್‌ಕುಮಾರ್ ಮಾತನಾಡಿದರು. ಬಿಜೆಪಿ ಮುಖಂಡರಾದ ರವಿಶಂಕರ್ ಹೆಬ್ಬಾಕ, ಚಂದ್ರಶೇಖರಬಾಬು, ರೈತ ಮುಖಂಡ ವೆಂಕಟೇಗೌಡ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular