ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಸಮಾಧಾನದ ಬೇಗುದಿ ತೀವ್ರಗೊಂಡಿದ್ದು, ಯಾವುದೇ ಕ್ಷಣದಲ್ಲಿ ಇದು ಸ್ಫೋಟಗೊಂಡು ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ನಾವು ಆಪರೇಷನ್ ಕಮಲ ಮಾಡಲ್ಲ. ಆದರೆ, ಹತಾಶ ಕಾಂಗ್ರೆಸ್ ಶಾಸಕರು ತಾವಾಗಿಯೇ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸಿನ ಯಾವುದೇ ಶಾಸಕರನ್ನು ನಾವು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಅವರೇ ಬರ್ತಾರೆ ಇದಕ್ಕೆ ಆಪರೇಷನ್ ಕಮಲ ಅಂತಾರೆ ಎಂದು ತಿಳಿಸಿದ್ದಾರೆ.
ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೇವಲ ರಾಜು ಕಾಗೆ ಮತ್ತು ಬಿ ಆರ್ ಪಾಟೀಲ್ ಮಾತ್ರವಲ್ಲ, ಅನೇಕರು ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಸದ್ಯದಲ್ಲಿಯೇ ತಮ್ಮ ಅಸಮಾಧಾನ ಬಹಿರಂಗಪಡಿಸಲಿದ್ದಾರೆ ಕಾದುನೋಡಿ ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದ ಆರೋಪದ ಮೇಲೆ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಮೇಲೆ ಕೇಸ್ ಹಾಕಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ರೀತಿ ತುರ್ತು ಪರಿಸ್ಥಿತಿ ತರುವ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


