ಕಾವ್ಯವೆಂದರೆ ಬೇಕಾಬಿಟ್ಟಿ ಬರೆಯುವುದಲ್ಲ. ಧ್ಯಾನದಲ್ಲಿ ಹುಟ್ಟುವ ಅನುಭೂತಿಯೇ ಕಾವ್ಯ. ಹೃದಯದ, ಮನಸ್ಸಿನ ಅಭಿವ್ಯಕ್ತಿಯಾಗಿರಬೇಕು. ಚಿಕ್ಕಮಕ್ಕಳ ನಗುವಿನಂತೆ ಕಾವ್ಯ ಮುದ ನೀಡಬೇಕು, ಮನಸ್ಸಿಗೆ ನಾಟುವಂತಿರಬೇಕು ಎಂದು ಜಾನಪದ ವಿದ್ವಾಂಸ ಡಾ.ಮೀರಸಾಬಿಹಳ್ಳಿ ಶಿವಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ದುಗ್ಗೇನಹಳ್ಳಿ ಸಿದ್ಧೇಶ್ ಅವರ ‘ಗುರುವಿನ ಜೋಳಿಗೆ’ ಕವನ ಸಂಕಲವನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ಕಾವ್ಯರಚನೆ ಮಾಡುವ ಕವಿ ತಾನು ನಿಂತ ನೀರಾಗದೆ ವಿಕಸನಗೊಳ್ಳಬೇಕು. ಚಲನಶೀಲತೆ, ಸೃಜನಶೀಲತೆಯನ್ನು ಬೆಳೆಸಿಕೊಂಡು ಬೆಳೆಯಬೇಕು. ಅದು ಸರಿಯಾದ ಬೆಳವಣಿಗೆ ಎಂದರು.
ಕವಿ ದುಗ್ಗೇನಹಳ್ಳಿ ಸಿದ್ಧೇಶ್ ಅವರ ಹುಟ್ಟಿ ಬೆಳೆದ ಪರಿಸರ, ಅಭಿವ್ಯಕ್ತಿಯಲ್ಲಿ ಆಧ್ಯಾತ್ಮದ ಸ್ಪರ್ಶ ಅವರ ಕವಿತೆಗಳಲ್ಲಿ ಕಾಣುತ್ತಿದೆ. ಈಗಿನ ಸಾಹಿತ್ಯ ವಲಯದ ಎಡ-ಬಲ ಪಂಥದ ಬಡಿದಾಟದಲ್ಲಿ ನಮ್ಮ ಸತ್ವ ಕಳೆದುಕೊಳ್ಳುತ್ತಿದ್ದೇವೆ ಎನಿಸುತ್ತಿದೆ. ಬಹುತ್ವ ಎಂದು ಹೇಳುತ್ತೇವೆ, ಆದರೆ ಇನ್ನೊಬ್ಬರ ಅಭಿಪ್ರಾಯ ಆಲಿಸುವ, ಗೌರವಿಸುವ ಮನೋಭಾವ ಇಲ್ಲ. ನೆರೆಹೊರೆಯವರ ಮಾತನ್ನು ಸಹಿಸಿಕೊಳ್ಳುವುದು ಬಂಗಾರದ ಗುಣ ಎಂದು ಹೇಳಿದರು.
ಸಾಹಿತಿ ಡಾ.ಬಿ.ಜಿ.ಹರೀಶ್ ಅವರು ‘ಗುರುವಿನ ಜೋಳಿಗೆ’ಯ ಕವಿತೆಗಳನ್ನು ಕರಿತು ಮಾತನಾಡಿ, ಕವಿಯು ವೈಯಕ್ತಿಕವಾಗಿ ಬರೆದ ಕವಿತೆಗಳು ನಂತರ ಸಾರ್ವತ್ರಿಕವಾಗುತ್ತವೆ. ಆ ಎಚ್ಚರಿಕೆಯಿಂದ ಕವಿತೆಗಳ ರಚನೆಯಾಗಬೇಕು. ಕವಿತೆಗಳು ಸಮಾಜದ ನೋವಿಗೆ ಸಮಾಧಾನ ಹೇಳುವಂತಾಗಬೇಕು. ಕವಿತೆಗಳು ತನ್ನವೆನ್ನುವ ಭಾವನೆ ಓದುಗರಿಗೆ ಬರುವಂತಾದರೆ ಆ ಕವಿತೆಗಳು ಯಶಸ್ವಿಯಾಗುತ್ತವೆ. ಸಿದ್ಧೇಶ್ ಅವರು ತಮ್ಮ ಕವಿತೆಗಳಲ್ಲಿ ಭಾಷೆ, ರೂಪಕಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಗಾಂಧೀಜಿ ಕೂಡ ಪ್ರಶ್ನಾತೀತರೇನಲ್ಲ, ಅವರ ಕಾಲದಲ್ಲಿ ಅವರನ್ನು ಟೀಕಿಸಿ, ಪ್ರಶ್ನಿಸಿ ಉತ್ತರ ಪಡೆದವರಿದ್ದರು. ಆದರೆ, ತಮ್ಮನ್ನು ಟೀಕಿಸಿದವರನ್ನು, ಬೈದವರನ್ನು ಗಾಂಧೀಜಿ ಯಾವತ್ತೂ ವಿರೋಧಿಸಲಿಲ್ಲ, ಟೀಕಿಸಲಿಲ್ಲ. ಈ ಗುಣ ನಮಗೆ ಮಾರ್ಗದರ್ಶನವಾಗಬೇಕು. ಸಾಹಿತ್ಯವು ಸ್ಪರ್ಧೆಯಿಂದ ಹುಟ್ಟುವುದಿಲ್ಲ, ಸಾಹಿತ್ಯ ಮನುಷ್ಯನ ಏಳಿಗೆಗೆ, ಅಭ್ಯುದಯಕ್ಕೆ ಪೂರಕವಾಗಿರಬೇಕು. ಎಲ್ಲಾ ಸಾಹಿತ್ಯದ ಗುರಿ ತತ್ವದತ್ತ ಸಾಗಬೇಕು ಎಂದು ಆಶಿಸಿದರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅಶೋಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಸಾಹಿತಿ ಬಾ.ಹ.ರಮಾಕುಮಾರಿ, ಡಾ.ಸಿ.ರಂಗನಾಥ್, ರಾಣಿ ಚಂದ್ರಶೇಖರ್, ಮರಿಯಂಬಿ ಭಾಗವಹಿಸಿದ್ದರು.


