ವಿದ್ಯಾರ್ಥಿ ಜೀವನದಲ್ಲೇ ಪುಸ್ತಕ ಬರೆಯುವುದು ಮಾದರಿಯ ಕೆಲಸವಾಗಿದೆ. ಜನಪದದ ಕುರಿತು ಶಶಿಕುಮಾರ್ ಮಾಡಿರುವ ಕಾರ್ಯ ಶ್ಲಾಘನೀಯ. ಎಲ್ಲರಿಗಿಂತ ಭಿನ್ನವಾಗಿ ಯೋಚಿಸಲು ಸಾಧ್ಯವಾದಾಗಲೇ ಉತ್ತಮ ಕೃತಿ ಸೃಷ್ಟಿಯಾಗುತ್ತದೆ. ಕನಸುಗಳ ಹಾದಿಯಲ್ಲಿ ನಂಬಿಕೆ ಇಟ್ಟಾಗ ಸಾಧನೆ ಮಾಡಲು ದಾರಿ ಸಿಗುತ್ತದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಮತ್ತು ಜುಂಜಪ್ಪ ಅಧ್ಯಯನ ಪೀಠದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ, ‘ಎಳ್ಹೊಲದ ಈರಚಿಕ್ಕಣ್ಣ’ ಕೃತಿ ಲೋಕಾರ್ಪಣೆ ಕಾರ್ಯಕಮವನ್ನು ಉದ್ಘಾಟಿಸಿ ಹಾಗೂ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾವು ಬಂದ ಹಿನ್ನೆಲೆ, ಸಂಪ್ರದಾಯ, ಸಂಸ್ಕೃತಿಯನ್ನು ಮರೆಯಬಾರದು. ಜ್ಞಾನಕ್ಕಾಗಿ ಓದಬೇಕು, ಜ್ಞಾನ ಜೀವನದಲ್ಲಿ ಸುಧಾರಣೆಯ ಜೊತೆಯಲ್ಲಿ ಉತ್ತಮ ಉದ್ಯೋಗವನ್ನೂ ತರುತ್ತದೆ. ಅದರಿಂದ ನಿಜವಾದ ಸಾಧನೆ ದೊರೆಯುತ್ತದೆ. ಮಕ್ಕಳು ತಂದೆ-ತಾಯಿ ತಲೆತಗ್ಗಿಸುವ ಕೆಲಸ ಮಾಡದೆ, ತಲೆ ಎತ್ತುವಂಥ ಸಾಧನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಸಂಬಂಧ. ಮೇಲ್ವರ್ಗದವರು ತಮ್ಮ ಆಚಾರಗಳನ್ನು ಉಳಿಸಿಕೊಳ್ಳಲು ಬರೆದ ಸಾಹಿತ್ಯವೇ ಪುರಾಣಗಳು. ಅವುಗಳಲ್ಲಿ ಹಲವು ಹುನ್ನಾರಗಳು ಅಡಗಿವೆ. ಆದರೆ ಪುರಾಣಗಳಿಗಿಂತ ನನಗೆ ನೈಜಮನುಷ್ಯ ಸಂಬಂಧ, ಪ್ರೀತಿ, ವಿಶ್ವಾಸ, ಹೆಚ್ಚು ಮುಖ್ಯ ಎಂದು ಜನಪದ ಚಿಂತಕ ಪ್ರೊ.ಮ.ಲ. ನಮೂರ್ತಿ ಹೇಳಿದರು.
ಬುಡಕಟ್ಟು ಎಂದರೆ ಒಗ್ಗೂಡುವಿಕೆ. ಕುಲದ ಚರಿತ್ರೆ ಬರೆಯುವುದು ಅಹಂಕಾರವಲ್ಲ, ಅದು ಆತ್ಮವಿಶ್ವಾಸ. ಇಂದಿನ ಟಿವಿ, ಮೊಬೈಲ್‌ಗಳ ಕಾಲದಲ್ಲಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿರುವ ಸ್ಥಿತಿಯಲ್ಲಿ ಶಶಿಕುಮಾರ್ ಪುಸ್ತಕ ಬರೆದಿರುವುದು ಪ್ರಶಂಸನೀಯ ಎಂದರು.
ನಮ್ಮ ಕುಟುಂಬದಲ್ಲಿ ಡಿಗ್ರಿ ಮಟ್ಟದ ಶಿಕ್ಷಣ ಪಡೆದ ಮೊದಲ ವ್ಯಕ್ತಿ ನಾನು. ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ನಾನು ಇಂದು ಈಮಟ್ಟಿಗೆ ಬಂದಿದ್ದೇನೆಂದರೆ, ಅದು ನನ್ನ ತಂದೆ-ತಾಯಿಯ ಪ್ರೇರಣೆ ಮತ್ತು ಬೆಂಬಲದಿಂದ ಸಾಧ್ಯವಾಗಿದೆ ಎಂದು ‘ಎಳ್ಹೊಲದ ಈರಚಿಕ್ಕಣ್ಣ’ ಕೃತಿಯ ಕರ್ತೃ ಶಶಿಕುಮಾರ್ ಗೌಡಿಹಳ್ಳಿ ಹೇಳಿದರು.
ಎಳ್ಹೊಲದ ಈರಚಿಕ್ಕಣ್ಣ, ಬುಡಕಟ್ಟು ಜನಾಂಗದ ಪ್ರಮುಖ ಸಾಂಸ್ಕೃತಿಕ ನಾಯಕರಾಗಿದ್ದರು. ಹತ್ತು ವರ್ಷಗಳ ಹಿಂದೆ ಅವರ ಕುರಿತು ಯಾರಾದರೂ ಅಧ್ಯಯನ ಮಾಡುತ್ತಿದ್ದರೆ, ಸಾವಿರಕ್ಕೂ ಹೆಚ್ಚು ಪುಟಗಳನ್ನು ತುಂಬಬಹುದಾದಷ್ಟು ತ್ರಿಪದಿ ಸಾಲುಗಳು ಸಿಗುತ್ತಿದ್ದವು. ಇಂದು ನನಗೆ ಸಿಕ್ಕಿದ್ದು ಕೆಲವೇ ತ್ರಿಪದಿ ಸಾಲುಗಳು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರೊ.ಆಶಾ ಬಗ್ಗನಾಡು ನಿರೂಪಿಸಿದರು. ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಡಾ.ಎಸ್.ಶಿವಣ್ಣ ಬೆಳವಾಡಿ ಸ್ವಾಗತಿಸಿದರು. ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ದಾಕ್ಷಾಯಿಣಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ನಾಗರಾಜ ಇದ್ದರು.


